Thursday, April 23, 2026
Google search engine

HomeUncategorizedರಾಷ್ಟ್ರೀಯಭಾರತ-ಚೀನಾ ವಲಸಿಗರ ಮೇಲೆ ಟ್ರಂಪ್ ಕಟು ವಾಗ್ದಾಳಿ

ಭಾರತ-ಚೀನಾ ವಲಸಿಗರ ಮೇಲೆ ಟ್ರಂಪ್ ಕಟು ವಾಗ್ದಾಳಿ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ವಲಸಿಗರ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಜನ್ಮಸಿದ್ಧ ಪೌರತ್ವದ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅವರು ವಲಸಿಗರನ್ನು ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದ್ದಾರೆ.

ಟ್ರಂಪ್ ಅವರು ತಮ್ಮ ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಈ ಪತ್ರದಲ್ಲಿ ಭಾರತ ಮತ್ತು ಚೀನಾವನ್ನು ಕೇವಲ ನರಕದ ಕೂಪಗಳು ಎಂದು ಕರೆಯುವುದರ ಜೊತೆಗೆ ಇವುಗಳು “ನಾಗರಿಕತೆಯ ತೊಟ್ಟಿಲುಗಳಲ್ಲ” ಎಂದು ವಿವಾದಾತ್ಮಕವಾಗಿ ಹೀಯಾಳಿಸಲಾಗಿದೆ.

ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರನ್ನು “Gangsters with Laptops” ಎಂದು ಕರೆಯುವ ಮೂಲಕ, ಅವರು ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟ್ರಂಪ್‌ ದೂರಿದ್ದಾರೆ.

ಈ ದೇಶಗಳಿಂದ ಬರುವವರು ಅಮೆರಿಕದ ಧ್ವಜವನ್ನು ಗೌರವಿಸುವುದಿಲ್ಲ ಮತ್ತು ಇಲ್ಲಿನ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಚೀನಾದಂತಹ ದೇಶಗಳಿಂದ ಜನರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಇಲ್ಲಿ ಮಗುವಿಗೆ ಜನ್ಮ ನೀಡಿ, ಮಗುವಿಗೆ ಜನ್ಮಸಿದ್ಧವಾಗಿ ಸಿಗುವ ಅಮೆರಿಕದ ಪೌರತ್ವವನ್ನು ಪಡೆಯುತ್ತಿದ್ದಾರೆ. ಇದು ಅಮೆರಿಕದ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಗರ್ಭಿಣಿಯರು 9ನೇ ತಿಂಗಳಲ್ಲಿ ಅಮೆರಿಕಕ್ಕೆ ಬಂದು ಮಗು ಹೆರುವ ಮೂಲಕ ಪೌರತ್ವ ಪಡೆಯುವ ʼಹೆರಿಗೆ ಪ್ರವಾಸʼವನ್ನು ಕೊನೆಗಾಣಿಸುವುದಾಗಿ ಹೇಳಿದ್ದಾರೆ.

ಜನ್ಮಸಿದ್ಧ ಪೌರತ್ವವನ್ನು ನೀಡಲು ಅನುಮತಿಸುವ ವಿಶ್ವದ ಏಕೈಕ ಮೂರ್ಖ ದೇಶ ಅಮೆರಿಕ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. “Birthright Citizenship… is about the BABIES OF SLAVES!” ಎಂಬ ಹೇಳಿಕೆಯ ಮೂಲಕ ಈ ನಿಯಮವು ಪ್ರವಾಸಿಗರಿಗೆ ಅನ್ವಯಿಸಬಾರದು ಎಂಬ ವಾದವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ.

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಅಲ್ಲಿ ಜನಿಸುವ ಯಾವುದೇ ಮಗುವಿಗೆ ತಾನಾಗಿಯೇ ಪೌರತ್ವ ಸಿಗುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಗರ್ಭಿಣಿಯರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಮಗು ಹೆರುವ ಮೂಲಕ ಆ ಮಗುವಿಗೆ ಇನ್‌ಸ್ಟಂಟ್  ಪೌರತ್ವ ಪಡೆಯುತ್ತಿದ್ದಾರೆ. ಒಮ್ಮೆ ಮಗುವಿಗೆ ಪೌರತ್ವ ಸಿಕ್ಕರೆ, ನಂತರ ಆ ಮಗುವಿನ ಮೂಲಕ ಇಡೀ ಕುಟುಂಬವನ್ನೇ ಅಮೆರಿಕಕ್ಕೆ ಕರೆಸಿಕೊಳ್ಳುತ್ತಾರೆ. ಇದನ್ನು ಅವರು “ಆಂಕರ್ ಬೇಬಿ” ಸಮಸ್ಯೆ ಎಂದು ಕರೆದಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿರುವ ತಂತ್ರಜ್ಞಾನ ಕಂಪನಿಗಳಲ್ಲಿ ಭಾರತ ಮತ್ತು ಚೀನಾದ ವೃತ್ತಿಪರರೇ ಹೆಚ್ಚಾಗುತ್ತಿದ್ದು, ಅಮೆರಿಕದ ಬಿಳಿಯರಿಗೆ ಉದ್ಯೋಗ ಸಿಗುತ್ತಿಲ್ಲ. ಪೌರತ್ವ ಎನ್ನುವುದು ಗೌರವದ ಸಂಕೇತವಾಗಿರಬೇಕೇ ಹೊರತು, ಪ್ರವಾಸಿಗರು ಮತ್ತು ವಿದೇಶಿಯರು ಅಕ್ರಮವಾಗಿ ಪಡೆಯುವ ಉಡುಗೊರೆಯಾಗಬಾರದು ಎಂಬ ನಿಲುವನ್ನು ಟ್ರಂಪ್‌ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

RELATED ARTICLES
- Advertisment -
Google search engine

Most Popular