ಕೋಲಾರ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಯೊಬ್ಬ ಬಾವಿಗೆ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.
ಪರೀಕ್ಷೆಯಲ್ಲಿ ಪಾಸ್ ಆದ ಬೆನ್ನೆಲೆ ಖುಷಿಯನ್ನ ಸಂಭ್ರಮಿಸಲು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮುಳಬಾಗಿಲು ತಾಲೂಕಿನ ಸೋಣ್ಣವಾಡಿ ಗ್ರಾಮದ 15 ವರ್ಷದ ಕಿರಣ್ ಎಂಬ ವಿದ್ಯಾರ್ಥಿ ಸಾವಿನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇಂದು ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಿರಣ್ ತನ್ನ ಸ್ನೇಹಿತರೊಂದಿಗೆ ಗ್ರಾಮದ ಸಮೀಪವಿರುವ ಬಾವಿಗೆ ಈಜಲು ಹೋಗಿದ್ದಾನೆ. ಈ ವೇಳೆ ನೀರಿನ ಆಳ ತಿಳಿಯದೆ ಆತ ಮುಳುಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನ ಹೊರತೆಗೆದಿದ್ದಾರೆ.
ಮಗನ ಯಶಸ್ಸಿನ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಈ ಸುದ್ದಿ ಬರಸಿಡಿಲಿನಂತೆ ಬಂದೆರಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.



