ಬೀದರ್ : ಜಿಲ್ಲೆಯ ಭಾಲ್ಕಿ ಉಪವಿಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ರೌಡಿ ಶೀಟರ್‌ಗಳು ಹಾಗೂ ಸಮಾಜಘಾತುಕ ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಭರ್ಜರಿ ಮೆಗಾ ಕಾರ್ಯಾಚರಣೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಹಾಗೂ ಭಾಲ್ಕಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಆಕಸ್ಮಿಕ ದಾಳಿ ನಡೆಸಲಾಗಿದ್ದು, ಉಪವಿಭಾಗದ 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 20ಕ್ಕೂ ಹೆಚ್ಚು ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ಸುಮಾರು 100ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ವಾಹನಗಳು, ದಾಖಲೆರಹಿತ ವಸ್ತುಗಳು ಹಾಗೂ ಇತರ ಅನುಮಾನಾಸ್ಪದ ಸಾಮಗ್ರಿಗಳ ಕುರಿತು ಪರಿಶೀಲನೆ ನಡೆಸಲಾಗಿದೆ.
ಕಾರ್ಯಾಚರಣೆ ಬಳಿಕ 100ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಠಾಣೆಗಳಿಗೆ ಕರೆತಂದು ಅವರ ಇತ್ತೀಚಿನ ಚಟುವಟಿಕೆಗಳು, ಸಂಪರ್ಕ ಜಾಲ ಹಾಗೂ ನ್ಯಾಯಾಲಯದ ಆದೇಶಗಳ ಪಾಲನೆ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರತಿಯೊಬ್ಬರ ಮೇಲೂ ದಾಖಲೆಗಳ ಆಧಾರದಲ್ಲಿ ಕ್ರಾಸ್‌ಚೆಕ್ ನಡೆಸಿದ್ದು, ಸಾರ್ವಜನಿಕ ಶಾಂತಿ ಭಂಗ ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾಲ್ಕಿ ಉಪವಿಭಾಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುವವರನ್ನು ಯಾವುದೇ ಮುಲಾಜಿಲ್ಲದೆ ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟ ಸಂದೇಶ ನೀಡಿದೆ. ಈ ದಿಢೀರ್ ಕಾರ್ಯಾಚರಣೆಯಿಂದ ಜಿಲ್ಲೆಯ ರೌಡಿ ವಲಯದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.



