ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಸ್ಟೀಫನ್ ಫ್ಲೆಮಿಂಗ್ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಇದರೊಂದಿಗೆ 2009ರಿಂದ ಆರಂಭವಾದ IPL ಇತಿಹಾಸದ ಅತ್ಯಂತ ದೀರ್ಘ ಮತ್ತು ಯಶಸ್ವಿ ಕೋಚ್–ಫ್ರಾಂಚೈಸಿ ಸಹಭಾಗಿತ್ವಕ್ಕೆ ತೆರೆ ಬಿದ್ದಂತಾಗಿದೆ.
2008ರ ಮೊದಲ IPL ಆವೃತ್ತಿಯಲ್ಲಿ ಆಟಗಾರನಾಗಿ CSK ತಂಡವನ್ನು ಪ್ರತಿನಿಧಿಸಿದ್ದ ಫ್ಲೆಮಿಂಗ್, ಅದೇ ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಂತರ 2009ರಲ್ಲಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಅವರು, ನಾಯಕ ಎಂ.ಎಸ್. ಧೋನಿ ಅವರೊಂದಿಗೆ ಸೇರಿ ಚೆನ್ನೈ ತಂಡವನ್ನು ವಿಶ್ವದ ಅತ್ಯಂತ ಯಶಸ್ವಿ ಟಿ20 ತಂಡಗಳಲ್ಲಿ ಒಂದಾಗಿ ರೂಪಿಸಿದರು.
ಆದರೆ ಕಳೆದ ಕೆಲವು ಸೀಸನ್‌ಗಳಲ್ಲಿ CSK ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಸತತ ಮೂರು ಆವೃತ್ತಿಗಳಲ್ಲಿ ಪ್ಲೇ-ಆಫ್ ಪ್ರವೇಶಿಸದ ತಂಡ, ಇತ್ತೀಚಿನ ವರ್ಷಗಳಲ್ಲಿ 10ನೇ ಹಾಗೂ 8ನೇ ಸ್ಥಾನಗಳಲ್ಲಿ ತನ್ನ ಅಭಿಯಾನ ಮುಗಿಸಿತ್ತು. ಈ ಹಿನ್ನೆಲೆ ಫ್ಲೆಮಿಂಗ್ ಕೋಚ್ ಸ್ಥಾನ ತೊರೆಯುವ ಕುರಿತು ಹಲವು ದಿನಗಳಿಂದ ಊಹಾಪೋಹಗಳು ಕೇಳಿಬರುತ್ತಿದ್ದವು. ಇದೀಗ ಫ್ರಾಂಚೈಸಿಯೇ ಈ ಬದಲಾವಣೆಯನ್ನು ಅಧಿಕೃತವಾಗಿ ದೃಢಪಡಿಸಿದೆ.
ತಂಡದ ಆಡಳಿತ ಮಂಡಳಿ ಮತ್ತು ಫ್ಲೆಮಿಂಗ್ ಪರಸ್ಪರ ಒಪ್ಪಿಗೆಯೊಂದಿಗೆ ಈ ನಿರ್ಧಾರ ಕೈಗೊಂಡಿದ್ದು, ಮುಂದಿನ IPL ಆವೃತ್ತಿಗೆ ಹೊಸ ಮುಖ್ಯ ಕೋಚ್ ನೇಮಕವಾಗಲಿದ್ದಾರೆ. ಜೊತೆಗೆ, ಅಮೆರಿಕಾದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ CSK ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಿರಾಸಾಜನಕ ಪ್ರದರ್ಶನವೂ ಈ ನಿರ್ಧಾರಕ್ಕೆ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ IPL ಪ್ರಶಸ್ತಿ (2010, 2011, 2018, 2021, 2023), ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿ, 10 ಬಾರಿ ಫೈನಲ್ ಪ್ರವೇಶ ಹಾಗೂ 12 ಬಾರಿ ಪ್ಲೇ-ಆಫ್‌ಗೆ ಅರ್ಹತೆ ಪಡೆದು ಅಪೂರ್ವ ಸಾಧನೆ ಮಾಡಿದೆ. ಸುಮಾರು 18 ವರ್ಷಗಳ ಯಶಸ್ವಿ ಪಯಣದ ಬಳಿಕ ಫ್ಲೆಮಿಂಗ್ ಅವರ ನಿರ್ಗಮನವು CSK ಇತಿಹಾಸದಲ್ಲಿ ಮಹತ್ವದ ತಿರುವಾಗಿ ದಾಖಲಾಗಲಿದೆ.



