Wednesday, February 4, 2026
Google search engine

HomeUncategorizedರಾಷ್ಟ್ರೀಯದೆಹಲಿಯಲ್ಲಿ ಸತ್ತವರ ಹೆಸರಲ್ಲೂ ರೇಷನ್ ಕಾರ್ಡ್: ಸಮೀಕ್ಷೆಯಿಂದ ಶಾಕ್

ದೆಹಲಿಯಲ್ಲಿ ಸತ್ತವರ ಹೆಸರಲ್ಲೂ ರೇಷನ್ ಕಾರ್ಡ್: ಸಮೀಕ್ಷೆಯಿಂದ ಶಾಕ್

ನವದೆಹಲಿ : ಕರ್ನಾಟಕದಂತೆ ರಾಷ್ಟ್ರ ರಾಜಧಾನಿಯಲ್ಲೂ ರೇಷನ್‌ ಕಾರ್ಡ್‌ನಲ್ಲಿ ಗೋಲ್ಮಾಲ್‌ಗಳು ನಡೆದಿವೆ. ದೆಹಲಿಯಲ್ಲಿ ರೇಷನ್‌ ಕಾರ್ಡ್‌ ಕುರಿತ ಸಮೀಕ್ಷೆಯು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಬೆಚ್ಚಿಬೀಳಿಸಿದೆ. ಒಂದು ಕಡೆ ಸತ್ತವರ ಹೆಸರಿನಲ್ಲಿ ರೇಷನ್‌ ಕಾರ್ಡ್‌ ಇರೋದು ಕಂಡುಬಂದಿದ್ದರೆ, ಮತ್ತೊಂದು ಕಡೆ ಅರ್ಹತೆಗಿಂತಲೂ ಹೆಚ್ಚು ಆದಾಯ ಗಳಿಸಿರುವ ಉದ್ಯಮಿಗಳೂ ಫಲಾನುಭವಿಗಳ ಪಟ್ಟಿಯಲ್ಲಿರೋದು ಕಂಡುಬಂದಿದೆ. ಈ ರೀತಿಯ 2 ಲಕ್ಷ ಪಡಿತರ ಚೀಟಿಗಳನ್ನ ಗುರುತಿಸಲಾಗಿದೆ ಎಂದು ಬಿಜೆಪಿ ಶಾಸಕ ಹರೀಶ್ ಖುರಾನಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖುರಾನಾ, 2015 ಮತ್ತು 2024 ರ ನಡುವೆ ವಿತರಣೆ ಮಾಡಲಾದ ಪಡಿತರ ಚೀಟಿಗಳ ಪರಿಶೀಲನೆ ನಡೆಸುವಾಗ ಈ ಅಕ್ರಮಗಳು ಬೆಳಕಿಗೆ ಬಂದಿವೆ. ಬಡವರಿಗೆ ಮೀಸಲಾದ ಸಹಾಯಧನಗಳು ಹಾಗೂ ಆಹಾರ ಅನರ್ಹರ ಪಾಲಾಗುತ್ತಿವೆ ಎಂಬುದು ಗೊತ್ತಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2014 ಮತ್ತು 2024 ರ ನಡುವೆ ದೆಹಲಿಯಲ್ಲಿ ಪಡಿತರ ಚೀಟಿಗಳಿಗಾಗಿ 9.22 ಲಕ್ಷ ಅರ್ಜಿಗಳನ್ನ ಸಲ್ಲಿಸಲಾಗಿದೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನ ತಿರಸ್ಕರಿಸಲಾಗಿದೆ. ಇನ್ನೂ ಅರ್ಹರ ಅರ್ಜಿಗಳನ್ನ ಖುದ್ದಾಗಿ ಪರಿಶೀಲಿಸಿದಾಗ ಉದ್ಯಮಿಗಳು, ಕಾರು ಮಾಲೀಕರು ಬಿಪಿಎಲ್‌ ಫಲಾನುಭವಿಗಳ ಪಟ್ಟಿಲ್ಲಿದ್ದಾರೆ. ಅವರು ಸರ್ಕಾರದ ಸೌಲಭ್ಯಗಳನ್ನ ಪಡೆಯುತ್ತಿರುವುದು ಕಂಡುಬಂದಿದೆ.

ಸತ್ತವರ ಹೆಸರಲ್ಲೂ ಕಾರ್ಡ್‌ – 7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪೈಕಿ 2 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆಯಾಗಿವೆ. ಅದರಲ್ಲಿ ಮೃತ ವ್ಯಕ್ತಿಗಳ ಹೆಸರಿನಲ್ಲಿ 6,038 ಕಾರ್ಡ್‌ಗಳು, 16,000 ನಕಲಿ ಕಾರ್ಡ್‌ಗಳು ಹಾಗೂ ವರ್ಷಕ್ಕೆ 6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುವ 1.44 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ಕಂಡುಬಂದಿವೆ. ಅಲ್ಲದೇ ಭಾರೀ ಪ್ರಮಾಣದಲ್ಲಿ ಭೂಮಿ ಆಸ್ತಿ ಹೊಂದಿರುವ 1.59 ಲಕ್ಷ ಕಾರ್ಡ್‌ಗಳು, ಕಾರು ಮತ್ತು ಇತರ ವಾಹನ ಹೊಂದಿರುವ 77,000 ಕಾರ್ಡ್‌ಗಳು, 25 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ಮತ್ತು ಜಿಎಸ್‌ಟಿ ಪಾವತಿಸುವ 2,700 ಕಾರ್ಡ್‌ಗಳನ್ನ ಫಲಾನುಭವಿಗಳಿಗೆ ಲಿಂಕ್‌ ಮಾಡಲಾಗಿದೆ. ಉದ್ಯಮಿಗಳು ಸರ್ಕಾರದ ಸಹಾಯಧನಗಳನ್ನು ಪಡೆಯುತ್ತಿರುವುದರಿಂದ ಬಡವರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಖುರಾನಾ ವಿವರಿಸಿದ್ದಾರೆ.

2.76 ಲಕ್ಷ ಫಲಾನುಭವಿಗಳಿಗೆ ನೋಟಿಸ್‌ – ಪರಿಶೀಲನೆ ವೇಳೆ ಸಿಕ್ಕ 2.76 ಲಕ್ಷ ಫಲಾನುಭವಿಗಳಿಗೆ ಶೋಕಾಸ್ ನೋಟಿಸ್‌ ನೀಡಲಾಗಿದೆ. ಎಸ್‌ಎಂಎಸ್ ಮೂಲಕವೂ ಸಂದೇಶ ಕಳುಹಿಸಲಾಗಿದೆ. ಅದರಲ್ಲಿ ಈವರೆಗೆ 227 ಜನರು ಮಾತ್ರ ಪ್ರತಿಕ್ರಿಯಿಸಿದ್ದಾರೆ. ಆದ್ರೆ ಈವರೆಗೆ ಯಾವುದೇ ಕಾರ್ಡುಗಳನ್ನ ರದ್ದುಗೊಳಿಸಲಾಗಿಲ್ಲ ಎಂದು ಖುರಾನಾ ಹೇಳಿದ್ದಾರೆ. ಶ್ವೇತಪತ್ರ ಬಿಡುಗಡೆಗೆ ಪತ್ರ – ಇನ್ನು ಕಳೆದ 10 ವರ್ಷಗಳಲ್ಲಿ ಪಡಿತರ ಚೀಟಿ ವಿತರಣೆಯ ಕುರಿತು ಶ್ವೇತಪತ್ರ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಬಿಜೆಪಿ ಶಾಸಕರು ಹೇಳಿದ್ದಾರೆ. ಜೊತೆಗೆ ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರು ಸೇರಿದಂತೆ ವಿದೇಶಿ ಪ್ರಜೆಗಳಿಗೆ ಪಡಿತರ ಚೀಟಿಗಳನ್ನು ನೀಡಲಾಗಿದೆಯೇ ಅನ್ನೋದನ್ನೂ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular