ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯು ಅತಂತ್ರ ಫಲಿತಾಂಶ ಕೊಟ್ಟಿರುವುದು ವಿವಿಧ ರಾಜಕೀಯ ಬಣ್ಣಗಳು ಹೊರಬರಲು ಕಾರಣವಾಗಿದೆ. 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತ ಸಿಗುವಂತಹ ಬೆಂಬಲ ಬಂದಿಲ್ಲ. ಹೀಗಾಗಿ, ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲ. ಇನ್ನೊಂದೆಡೆ, ತನ್ನ ಬದ್ಧ ವೈರಿ ಡಿಎಂಕೆ ಜೊತೆ ಕೈ ಜೋಡಿಸಿ ಸರ್ಕಾರ ರಚನೆಗೆ ಎಐಎಡಿಎಂಕೆ ಇಂಗಿತ ಹೊಂದಿದಂತಿದೆ. ರೆಸಾರ್ಟ್ ಪೊಲಿಟಿಕ್ಸ್ ಕೂಡ ಶುರುವಾಗಿದೆ.
ತಮಿಳುನಾಡು ಜನಾದೇಶ ತಮ್ಮ ಪಕ್ಷದ ಪರವಾಗಿದೆ. ಇದನ್ನೂ ಮೀರಿ ಡಿಎಂಕೆ ಮತ್ತು ಎಐಡಿಎಂಕೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದಲ್ಲಿ ತಮ್ಮ ಎಲ್ಲಾ 108 ಶಾಸಕರೂ ರಾಜೀನಾಮೆ ನೀಡುತ್ತಾರೆ ಎಂದು ಟಿವಿಕೆ ಬೆದರಿಕೆ ಹಾಕಿದೆ.
234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಟಿವಿಕೆ 108 ಸ್ಥಾನ ಪಡೆದಿದೆ. ಡಿಎಂಕೆ ಮೈತ್ರಿಕೂಟ 73, ಎಐಎಡಿಎಂಕೆ ಮೈತ್ರಿಕೂಟ 53 ಸ್ಥಾನಗಳನ್ನು ಹೊಂದಿವೆ. ಇಲ್ಲಿ ಡಿಎಂಕೆ 59 ಸ್ಥಾನ ಹಾಗೂ ಎಐಎಡಿಎಂಕೆ 47 ಸ್ಥಾನಗಳನ್ನು ಹೊಂದಿವೆ. ಎರಡೂ ಸೇರಿಸಿದರೆ 106 ಸ್ಥಾನಗಳಾಗುತ್ತವೆ. ಆಗಲೂ ಬೇರೆ ಬೇರೆ ಪಕ್ಷಗಳ ಬೆಂಬಲ ಬೇಕಾಗುತ್ತದೆ.
ಡಿಎಂಕೆ ಜೊತೆ ಕೈಜೋಡಿಸಲು ಎಐಎಡಿಎಂಕೆ ಪಕ್ಷವು ಎನ್ಡಿಎ ಮೈತ್ರಿಕೂಟ ತ್ಯಜಿಸಲು ಸಿದ್ಧವಿದೆ. ಸಮ್ಮಿಶ್ರ ಸರ್ಕಾರದ ಪ್ರಸ್ತಾಪವನ್ನು ಈ ಪಕ್ಷವೇ ಮಾಡಿದೆ. ಡಿಎಂಕೆಯಿಂದ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿವಿಕೆಗೆ ಸರ್ಕಾರ ರಚಿಸುವ ಅವಕಾಶ ತಪ್ಪಿಸಿದ ಆರೋಪ ತನಗೆ ಬಂದುಬಿಟ್ಟರೆ ಎನ್ನುವ ಭಯ ಡಿಎಂಕೆಯದ್ದು. ಹೀಗಾಗಿ, ಟಿವಿಕೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಾದು ಆ ನಂತರ ಯೋಚಿಸೋಣ ಎಂದು ಡಿಎಂಕೆ ಹೇಳುತ್ತಿದೆ.
ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ನ ಐವರು ಶಾಸಕರಿದ್ದಾರೆ. ಒಟ್ಟು ನಾಲ್ವರು ಶಾಸಕರಿರುವ ಎರಡು ಎಡಪಕ್ಷಗಳ ಬೆಂಬಲವನ್ನು ಟಿವಿಕೆ ಯಾಚಿಸಿದೆ. ಮುಸ್ಲಿಮ್ ಲೀಗ್ನ ಇಬ್ಬರು ಶಾಸಕರಿದ್ದಾರೆ. ಇವರೆಲ್ಲರೂ ಕೈಜೋಡಿಸಿದರೆ ಟಿವಿಕೆಗೆ ಬಹುಮತ ಸಿಗಬಹುದು. ಆದರೂ ಕೂಡ ತಮಿಳುನಾಡಿನಲ್ಲಿ ರಾಜಕೀಯ ಚದುರಂಗದಾಟ ಚಾಲನೆಗೊಂಡಿದೆ.
ಎಲ್ಲಾ 108 ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಆಗ ವಿಧಾನಸಭೆಯ ಗಾತ್ರ 234ರಿಂದ 126ಕ್ಕೆ ಇಳಿಯುತ್ತದೆ. ಬಹುಮತ ಸಾಬೀತು ಮಾಡಲು ಬೇಕಾದ ಶಾಸಕರ ಬೆಂಬಲ 64 ಮಾತ್ರವೇ ಬೇಕಾಗುತ್ತದೆ. ಆಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸುಲಭವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು.
ಟಿವಿಕೆ ಶಾಸಕರ ರಾಜೀನಾಮೆ ಬಳಿಕ ಆ 108 ಸ್ಥಾನಗಳಿಗೆ ಉಪಚುನಾವಣೆ ನಡೆಯಬಹುದು. ಅಲ್ಲಿ ಮತ್ತೆ ಎಲ್ಲಾ ಸ್ಥಾನಗಳಿಗೂ ಟಿವಿಕೆ ಅಭ್ಯರ್ಥಿಗಳೇ ಆಯ್ಕೆಯಾದರೆ ಮತ್ತೆ ರಾಜಕೀಯ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿಗೆ ಮತ್ತೊಮ್ಮೆ ಮರುಚುನಾವಣೆ ನಡೆಸಿದರೂ ಅಚ್ಚರಿ ಇಲ್ಲ.



