ಈ ಬಾರಿಯ ಮೆಟ್ ಗಾಲಾ ಫ್ಯಾಷನ್ ಈವೆಂಟ್‌ನಲ್ಲಿ ಭಾರತೀಯ ಸೆಲೆಬ್ರಿಟಿಗಳು ದೇಶದ ಪರಂಪರೆ ಮತ್ತು ಕಲೆಯ ಇತಿಹಾಸವಿರುವ ಉಡುಗೆಗಳನ್ನು ಧರಿಸಿ ವಿಶ್ವದ ಕಣ್ಮನ ಸೆಳೆದರು.
ಈ ಬಾರಿಯ ಮೆಟ್ ಗಾಲಾ ಸಮಾರಂಭದಲ್ಲಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ಪ್ರಸಿದ್ಧ ವಿನ್ಯಾಸಕ ಮನೀಶ್ ಮಲ್ಹೋತ್ರಾ, ಅನನ್ಯ ಬಿರ್ಲಾ, ಗೌರವಿ ಕುಮಾರಿ, ಸವಾಯಿ ಪದ್ಮನಾಭ್ ಸಿಂಗ್, ಸುಧಾ ರೆಡ್ಡಿ ಮತ್ತು ನಿಶಾ ಅಂಬಾನಿ ಭಾಗಿಯಾಗಿದ್ದರು.
ಮೆಟ್ ಗಾಲಾ ಎನ್ನುವುದು ನ್ಯೂಯಾರ್ಕ್‌ನ ಅತಿ ದೊಡ್ಡ ಫ್ಯಾಷನ್ ಶೋ (Fashion Show) ಕಾರ್ಯಕ್ರಮವಾಗಿದೆ. ಪ್ರತಿ ವರ್ಷವೂ ಒಂದು ವಿಶಿಷ್ಟವಾದ ‘ಥೀಮ್’ ಅಥವಾ ವಿಷಯದ ಆಧಾರದ ಮೇಲೆ ಈ ಈವೆಂಟ್ ನಡೆಯುತ್ತದೆ. ವಿಶ್ವದಾದ್ಯಂತ ಇರುವ ಪ್ರಸಿದ್ಧ ನಟ-ನಟಿಯರು, ಗಾಯಕರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಆಯಾ ವರ್ಷದ ಥೀಮ್‌ಗೆ ತಕ್ಕಂತೆ ವಿಭಿನ್ನ ಹಾಗೂ ಸೃಜನಾತ್ಮಕ ಉಡುಪುಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆಯುವುದು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದೆ. ಅಷ್ಟೇ ಅಲ್ಲ ಇದನ್ನು ಫ್ಯಾಷನ್ ಲೋಕದ ಅತಿದೊಡ್ಡ ಹಬ್ಬ ಎಂದು ಕರೆಯಲಾಗುತ್ತದೆ.
ಈ ಬಾರಿಯ ಮೆಟಗಾಲಾ ಈವೆಂಟ್ನಲ್ಲಿ ನಮ್ಮ ಭಾರತದ ಸೆಲೆಬ್ರೆಟಿಗಳು ಅತ್ಯಂತ ವಿಶೇಷವಾದ ಉಡುಗೆಯಲ್ಲಿ ಕಾಣಿಕೊಂಡಿರುವುದು ವಿಶ್ವದಾದ್ಯಂತ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ನಿಶಾ ಅಂಬಾನಿ ಐಶಾರಾಮಿ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ವಿನ್ಯಾಸಕಾರ ಗೌರವ್ ಗುಪ್ತಾ ಅವರಿಂದ ತಯಾರಾದ ರಾಯಲ್ ಥೀಮ್ ಸಾಂಪ್ರದಾಯಿಕ ಸೀರೆಯನ್ನು ಇವರು ಧರಿಸಿದ್ದರು. ಈ ಉಡುಪನ್ನು ಸಂಪೂರ್ಣವಾಗಿ ಚಿನ್ನದ ಎಳೆಗಳಿಂದ ತಯಾರಿಸಲಾಗಿತ್ತು. 200ಕ್ಕೂ ಹೆಚ್ಚು ವಜ್ರಗಳನ್ನು ಇದರಲ್ಲಿ ಬಳಸಲಾಗಿದೆ. 50ಕ್ಕೂ ಹೆಚ್ಚು ಕುಶಲಕರ್ಮಿಗಳ ಕೈಯಿಂದ ತಯಾರಿಸಲಾದ ವಿಶೇಷ ಉಡುಗೆ ಇದಾಗಿತ್ತು.
ಕರಣ್ ಜೋಹರ್ ಪ್ರಸಿದ್ದ ಉಡುಪು ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಅವರಿಂದ ತಯಾರಿಸಲಾದ ವಿಶೇಷ ಹ್ಯಾಡ್ ಮೇಡ್ ಟ್ರೆಡಿಷನಲ್ ಲುಕ್‌ನಲ್ಲಿ ರೆಟ್ ಕಾರ್ಪೆಟ್ ಪ್ರವೇಶ ಮಾಡಿದರು. ಇವರು ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾರತೀಯ ಕಸೂತಿ ಕಲೆಯಾದ ‘ಜರ್ಡೋಜಿ’ ವಿನ್ಯಾಸವಿರುವ ಉಡುಪು ಧರಿಸಿದ್ದರು. ಇದರಲ್ಲಿ ವರ್ಣಚಿತ್ರಕಾರ ರಾಜಾ ರವಿವರ್ಮನನ ಕಲೆಯನ್ನು ಪ್ರದರ್ಶಿಸಲಾಗಿತ್ತು.
ಉದ್ಯಮಿ ಅನನ್ಯ ಬಿರ್ಲಾ ಅವರು ಕಪ್ಪು ಬಣ್ಣದ ಕೌಚರ್ ಉಡುಪಿನೊಂದಿಗೆ ಕಲಾವಿದ ಸುಬೋಧ್ ಗುಪ್ತಾ ವಿನ್ಯಾಸಗೊಳಿಸಿದ ಲೋಹದ ಮುಖವಾಡ ಧರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.
ಜೈಪುರ ರಾಜಮನೆತನದ ಸದಸ್ಯರಾದ ಗೌರವಿ ಕುಮಾರಿ ಮತ್ತು ಸವಾಯಿ ಪದ್ಮನಾಭ್ ಸಿಂಗ್ ಕೂಡ ಮೊದಲ ಬಾರಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೌರವಿ ಕುಮಾರಿ ತಮ್ಮ ಅಜ್ಜಿ ಗಾಯತ್ರಿ ದೇವಿಯ ವಿಂಟೇಜ್ ಚಿಫೋನ್ ಸೀರೆಯನ್ನ ವಿಶೇಷ ಗೌನ್ ಆಗಿ ಪರಿವರ್ತಿಸಿ ಧರಿಸಿದ್ದರು. ಇವರ ಲೈಟ್ ಪಿಂಕ್ ಲುಕ್ ಎಲ್ಲರ ಗಮನ ಸೆಳೆಯಿತು. ಸವಾಯಿ ಪದ್ಮನಾಭ್ ಸಿಂಗ್ ಸಾಂಪ್ರದಾಯಿಕ ಸಿಲೂಯೆಟ್‌ಗಳ ಮೇಲೆ ಲೇಯರಿಂಗ್ ಮಾಡಿದ ವೆಲ್ವೆಟ್ ಕೋಟ್ ಧರಿಸಿದ್ದರು.
ಹೈದರಾಬಾದ್‌ನ ಉದ್ಯಮಿ ಸುಧಾ ರೆಡ್ಡಿ ಅವರು ಕಲಂಕರಿ ಕಲೆಯ ‘ಟ್ರೀ ಆಫ್ ಲೈಫ್’ ಮೋಟಿಫ್‌ಗಳಿರುವ ರಾಯಲ್ ಲುಕ್ ಉಡುಪಿನಲ್ಲಿ ಮಿಂಚಿದರು.



