ಶಿವಮೊಗ್ಗ :  ಉತ್ತರ ಭಾರತದ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು  ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ನಿವಾಸಕ್ಕೆ ಆಗಮಿಸಿ ಆತಿಥ್ಯ ಸ್ವೀಕರಿಸಿದರು.ಮಕ್ಕಳು 11 ದಿನಗಳ ಕಾಲ ನವದೆಹಲಿಯ ಜತೆಗೆ ಆಗ್ರಾ, ಮಥುರಾ, ಅಯೋಧ್ಯೆ, ವಾರಾಣಸಿ, ವಾಘಾ ಗಡಿ, ಅಮೃತಸರ ಸೇರಿದಂತೆ ವಿವಿಧ ತಾಣಗಳಿಗೆ ಪ್ರವಾಸ ಕೈಗೊಂಡಿದ್ದು, ಅವರೆಲ್ಲರೂ ವಿಮಾನದಲ್ಲಿ ನವದೆಹಲಿ ತಲುಪಿದ ಸಂಭ್ರಮದ ಕ್ಷಣಗಳನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಸಚಿವರು ತಿಳಿಸಿದ್ದಾರೆ. ಅವರ ಕಲಿಕೆ ಮತ್ತು ಗ್ರಹಿಕೆಯ ಶಕ್ತಿಯನ್ನು ಕಂಡು ನಾನು ಚಕಿತನಾದೆ. ಮಕ್ಕಳು ಪ್ರವಾಸ ಮಾಡುವ ಅಷ್ಟೂ ದಿನಗಳ ಕಾಲ ಅವರಿಗೆ ವಾಹನ ವ್ಯವಸ್ಥೆ ಮಾಡಿಕೊಟ್ಟು, ಅವರು ತಮ್ಮ ಸ್ವಗ್ರಾಮವನ್ನು ಮರಳಿ ತಲುಪುವವರೆಗೂ ಯಾವುದೇ ತೊಂದರೆ ಆಗದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ಗೃಹ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದೇನೆ.ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹರಸುತ್ತಾ, ಅವರನ್ನು ಇಷ್ಟು ದೂರ ಪ್ರವಾಸಕ್ಕೆ ಕಳಿಸಿದ ಪೋಷಕರು, ಅವರೆಲ್ಲರನ್ನೂ ಕರೆತಂದ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗವನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.