ಮದ್ದೂರು : ಉರಗಗಳು ಭೂಮಿಯ ಮೇಲಿನ ಪ್ರಮುಖ ಜೀವಿಗಳಲ್ಲಿ ಒಂದಾಗಿದ್ದು ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಮತ್ತು ಜೀವ ವೈವಿಧ್ಯವನ್ನು ಉಳಿಸಲು ಇವು ಅತ್ಯಂತ ಅವಶ್ಯಕ ಎಂದು ಉರಗ ತಜ್ಞ ಮ.ನ. ಪ್ರಸನ್ನ ಕುಮಾರ್ ಹೇಳಿದರು.ನಗರದ ಎಚ್. ಕೆ. ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉರಗ ಪ್ರಾತಕ್ಷ್ಯ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಹಾವುಗಳನ್ನು ಪ್ರದರ್ಶಿಸಿ ಮಾತನಾಡಿದರು.ವಿಶ್ವದಲ್ಲಿ ಸಾವಿರಾರು ಜಾತಿಯ ಹಾವುಗಳಿದ್ದು, ಹೆಚ್ಚಿನ ಹಾವುಗಳು ವಿಷಕಾರಿಯಲ್ಲ ಎಂದ ಅವರು ಮನುಷ್ಯರಂತೆ ಹಾವುಗಳು ಭೂಮಿಯ ಮೇಲೆ ಬದುಕುವ ಹಕ್ಕನ್ನು ಹೊಂದಿದ್ದು ವಿದ್ಯಾರ್ಥಿಗಳು ಅವುಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿಕೊಳ್ಳುವ ಮೂಲಕ ಜಾಗೃತವಾಗಬೇಕೆಂದು ತಿಳಿಸಿದರು. ಉರಗಗಳನ್ನು ರೈತನ ಮಿತ್ರ ಎಂದು ಕರೆದರೂ ಅವುಗಳ ಬಗ್ಗೆ ಜನರಲ್ಲಿ ಅಪಾರವಾದ ಮೂಢನಂಬಿಕೆಗಳಿದ್ದು, ಅದರಿಂದ ಹೊರ ಬರಬೇಕು ಹಾಗೂ ಅವುಗಳು ಮಾನವರ ಮೇಲೆ ಅನಗತ್ಯವಾಗಿ ದಾಳಿ ಮಾಡುವುದಿಲ್ಲ ಬದಲಾಗಿ ತಮಗೆ ಅಪಾಯ ಎದುರಾದಾಗ ಮಾತ್ರ ಬೇರೆ ಪ್ರಾಣಿಗಳಂತೆ ತಮ್ಮ ರಕ್ಷಣೆಗಾಗಿ ದಾಳಿ ಮಾಡುತ್ತವೆ ಎಂದು  ಹೇಳಿದರು. ನಗರೀಕರಣ ಹಾಗೂ ಕೈಗಾರೀಕರಣದಿಂದ ಮತ್ತು ಪರಿಸರ ನಾಶದಿಂದಾಗಿ ಹಾವುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಅಪಾಯಕಾರಿ ಎಂದ ಅವರು  ಹಾವುಗಳು ಆಹಾರ ಮತ್ತು ಆಶ್ರಯ ಹುಡುಕುತ್ತಾ ಜನಪ್ರದೇಶಗಳಿಗೆ ಬರುತ್ತಿದ್ದು ಅಂತಹ ಸಂದರ್ಭದಲ್ಲಿ ಅವುಗಳನ್ನು ಕೊಲ್ಲದೆ ಅರಣ್ಯ ಇಲಾಖೆ ಅಥವಾ ಉರಗ ರಕ್ಷಕರಿಗೆ ಮಾಹಿತಿ ನೀಡುವ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕೆಂದರು.ಇದೇ ವೇಳೆ ಹಾವುಗಳ ಬಗ್ಗೆ ಹಲವಾರು ಸ್ವಾರಸ್ಯಕರ ವಿಷಯಗಳನ್ನು ತಿಳಿಸಿದಾಗ, ವಿದ್ಯಾರ್ಥಿಗಳು ಹಾವುಗಳನ್ನು ಹತ್ತಿರದಿಂದ ನೋಡುವ ಜತೆಗೆ ಅದರ ಉಪಯೋಗಳ ಬಗ್ಗೆ ಆಸಕ್ತಿಯಿಂದ ತಿಳಿದುಕೊಂಡರು.ಈ ವೇಳೆ ಎಚ್. ಕೆ. ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಎಸ್. ಶಿವಕುಮಾರ್ ಉಪನ್ಯಾಸಕರುಗಳಾದ ಟಿ.ಸೋಮು , ಸಿ . ಸ್ಮಿತಾ, ನಂದಿನಿ, ರಾಜೇಶ್, ಪುಟ್ಟಸ್ವಾಮಿ, ಸುಚಿತ್ರ, ಚಾಂದಿನಿ, ರಕ್ಷಿತಾ ವಿದ್ಯಾಸೇರಿದಂತೆ ಇತರರು  ಹಾಜರಿದ್ದರು.