ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅನಗತ್ಯವಾಗಿ ಅರಾಜಕತೆ ಸೃಷ್ಟಿಸಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಗೌರವ್ ಭಾಟಿಯಾ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದರು.ದೇಶದಲ್ಲಿ ಇದುವರೆಗೆ 12 ಬಾರಿ ಎಸ್‌ ಐಆರ್  ಪ್ರಕ್ರಿಯೆ ನಡೆದಿದೆ. ಅದರಲ್ಲಿ 10 ಬಾರಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ನಡೆದಿದೆ. 2004ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್‌ ಐಆರ್ ನಡೆಸಿದಾಗ ಯಾರೂ ಪ್ರತಿರೋಧ ಒಡ್ಡಲಿಲ್ಲ. ಆಗ ಕಾಂಗ್ರೆಸ್ ಕಾಲದಲ್ಲಿ ಎಸ್‌ ಐಆರ್ ಪ್ರಕ್ರಿಯೆಯು ಸಾಂವಿಧಾನಿಕವಾಗಿತ್ತು, ಆದರೆ ಈಗ ಬಿಜೆಪಿ ಸರ್ಕಾರದಲ್ಲಿ ಅದು ಅಸಾಂವಿಧಾನಿಕವಾಗಿದ್ದು ಹೇಗೆ ಎಂದು ಪ್ರಶ್ನಿಸಿದ ಭಾಟಿಯಾ, ಇದಕ್ಕೆ ಕಾಂಗ್ರೆಸ್ ನಾಯಕರು ಉತ್ತರಿಸಲಿ ಎಂದು ಸವಾಲು ಹಾಕಿದರು.2004ರಿಂದ 2014ರ ವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಅಲ್ಪಸಂಖ್ಯಾತರ ತುಷ್ಟಿಕರಣದ ರಾಜಕೀಯದ ಉದ್ದೇಶದಿಂದಲೇ ಎಸ್‌ಐಆ‌ರ್ ಪ್ರಕ್ರಿಯೆಯನ್ನು ನಡೆಸಲಿಲ್ಲ. ಬಾಂಗ್ಲಾದೇಶದಿಂದ ಬರುವ ಅಕ್ರಮ ನುಸುಳುಕೋರರಿಗೆ ಬೆಂಬಲ ನೀಡುವ ಸಲುವಾಗಿ ಕಾಂಗ್ರೆಸ್ ಹೀಗೆ ಮಾಡಿತು ಎಂದು  ಆರೋಪಿಸಿದರು.ಈ ಸಂದರ್ಭದಲ್ಲಿ ಸಂಸದ ಕ್ಯಾ . ಬ್ರಿಜೇಶ್ ಚೌಟ,ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.