ಬೀದ‌ರ್: ಡೀಸೆಲ್ ಬೆಲೆಯನ್ನು  ಕೇಂದ್ರ ಸರ್ಕಾರ ನಿರಂತರವಾಗಿ ಹೆಚ್ಚಿಸುತ್ತಿರುವ ಕಾರಣ ಅನಿವಾರ್ಯವಾಗಿ ಬಸ್ ದರ ಪರಿಷ್ಕರಣೆ ಮಾಡಲಾಗಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆಯೇ ಇದೆ. ಈ ವಿಷಯದಲ್ಲಿ ವಿನಾಕಾರಣ ಬಿಜೆಪಿಯವರು ಬೊಬ್ಬೆ ಹಾಕುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ 13ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಿಸುತ್ತಲೇ ಬಂದಿದೆ. ಪೆಟ್ರೋಲ್ ಬೆಲೆ ಏರಿಕೆಯಾದರೆ ಬಸ್ ಟಿಕೆಟ್ ದರ ಹೆಚ್ಚಿಸುತ್ತಿರಲಿಲ್ಲ. ವೈಜ್ಞಾನಿಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ನಮ್ಮ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದರಲ್ಲಿ ವಾಸ್ತವಾಂಶ ಇದೆ ಎಂದು ಹೇಳಿದರು.ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕಬ್ಬಿನ ಎಫ್‌ ಆರ್‌ ಪಿ ದರ ಮತ್ತು ಸಕ್ಕರೆ ಮಾರಾಟ ಬೆಲೆ ನಿಗದಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಕ್ಕರೆ ಬೆಲೆ ಹೆಚ್ಚಿದರೆ ಮಾತ್ರ ಕಬ್ಬಿಗೆ ಹೆಚ್ಚಿನ ದರ ಸಿಗುಲು ಸಾಧ್ಯ. ಆದರೆ, ಸರ್ಕಾರ ಕಳೆದ ಐದು ವರ್ಷಗಳಿಂದ ಸಕ್ಕರೆ ಬೆಲೆಯನ್ನೇ ಪರಿಷ್ಕರಣೆ ಮಾಡಿಲ್ಲ. ಮತ್ತೊಂದೆಡೆ ಭೀಕರ ಬರಗಾಲದಿಂದ ರಾಜ್ಯದಲ್ಲಿ 50 ಲಕ್ಷ ಎಕರೆ ಬೆಳೆ ಹಾನಿಯಾಗಿದ್ದು, ಇನ್ನೂ ಪರಿಹಾರ ವಿತರಣೆ ಮಾಡಿಲ್ಲ. ಜಿಎಸ್‌ಟಿ ಸೇರಿ ಎಲ್ಲ ತೆರಿಗೆಗಳನ್ನು ಕೇಂದ್ರವೇ ಪಡೆದು, ತಪ್ಪುಗಳನ್ನು ಮಾಡುತ್ತ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.