ಹುಬ್ಬಳ್ಳಿ :  ಇಂದು ಹುಬ್ಬಳ್ಳಿಯಲ್ಲಿ ಚೇತನ ಸಮೂಹ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಿದ ಮಹಾವಿದ್ಯಾಲಯದ ಮೂರನೇ ಮಹಡಿ ಹಾಗೂ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಭಾಭವನದ ಉದ್ಘಾಟನೆ ಮತ್ತು ಚೇತನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಸಚಿವ ಪ್ರಹ್ಲಾದ್‌ ಜೋಶಿ ಪಾಲ್ಗೊಂಡರು.ಹುಬ್ಬಳ್ಳಿಯ ಚೇತನ ಸಮೂಹ ಸಂಸ್ಥೆಯು ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯಮ-ಕೇಂದ್ರಿತ ಶಿಕ್ಷಣ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳ ಅಭಿವೃದ್ಧಿ, ಉದ್ಯಮಶೀಲತೆಯ ಉತ್ತೇಜನ ಹಾಗೂ ವೃತ್ತಿ-ಸಿದ್ಧ ವೃತ್ತಿಪರರ ರೂಪಿಸುವಿಕೆಗೆ ಆದ್ಯತೆ ನೀಡುತ್ತಾ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿರುವ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಸಂಸ್ಥೆಯಾಗಿದೆ. ಜ್ಞಾನ, ಶಿಸ್ತು, ಮೌಲ್ಯಗಳು ಹಾಗೂ ಆಧುನಿಕ ಶಿಕ್ಷಣದ ಸಮನ್ವಯದ ಮೂಲಕ ಯುವಜನತೆಯನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ಇದೇ ವೇಳೆ ತಿಳಿಸಿದರು.ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದಿರುವ ಪ್ರಗತಿಪರ ರೈತ ಮಹಿಳೆ ಹಾಗೂ ಕೃಷಿ ಉದ್ಯಮಿ  ಕವಿತಾ ಮಿಶ್ರಾ ಅವರಿಗೆ ಮತ್ತು ನಡಕಟ್ಟಿನ ಅಗ್ರಿ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷ,ಪದ್ಮಶ್ರೀ ಡಾ. ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ 'ಚೇತನ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರು ಶ್ರೀ ಕ್ಷೇತ್ರ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ವಹಿಸಿದ್ದರು.  ಈ ಸಂದರ್ಭದಲ್ಲಿ ಮಾಜಿ ಸಭಾಪತಿ  ಹಾಗೂ ವಿಧಾನ ಪರಿಷತ್ ಸದಸ್ಯರಾದ   ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ  ಹಾಗೂ ಸಂಸದ ಜಗದೀಶ ಶೆಟ್ಟರ್‌, ಹು-ಧಾ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಡಿಕೆಎಸ್ ಎಜುಕೇಷನ್ ಟ್ರಸ್ಟ್‌ನ ಗೌರವಾಧ್ಯಕ್ಷ ರಾಜಣ್ಣ ಕೊರವಿ, ಮಾಜಿ ಸಂಸದ ಐ ಜಿ ಸನದಿ, ಡಾ. ಎ.ಎಚ್ ಚಚಡಿ. ಮುರುಗೇಶ್ ಸಿದ್ಧಾಳ,  ಜಗದೀಶ ದ್ಯಾವಪ್ಪನವರ,   ವಿಶ್ವನಾಥ ಕೊರವಿ ಸೇರಿದಂತೆ ಹಲವು ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.