ನವದೆಹಲಿ:  ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ `ಭಾರತ್ ರೈಸ್’  ಅನ್ನು ಹೆಚ್ಚುವರಿ ಹಂಚಿಕೆ ಮಾಡಿದ್ದು, ಜೊತೆಗೆ ಮೂರು ತಿಂಗಳ ಕಾಲ ಅಕ್ಕಿ ಮತ್ತು ಭತ್ತದ ದಾಸ್ತಾನು ಮಿತಿ ವಿಧಿಸಲು ರಾಜ್ಯಗಳಿಗೆ ಅನುಮತಿ ಸಹ ನೀಡಿದೆ.ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಗತ್ಯವಿರುವ ಕಡೆ 2027ರ ಜನವರಿ 31ರ ವರೆಗೆ ಅಕ್ಕಿ ಮತ್ತು ಭತ್ತದ ಮೇಲೆ ದಾಸ್ತಾನು ಮಿತಿ ವಿಧಿಸಲು ದಕ್ಷಿಣದ 5 ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಆಹಾರ ಧಾನ್ಯಗಳ, ವಿಶೇಷವಾಗಿ ಅಕ್ಕಿ ಬೆಲೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇಶೀಯವಾಗಿ ಸಾಕಷ್ಟು ಪೂರೈಕೆ ಇರುವಿಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು, ಅಕ್ರಮ ದಾಸ್ತಾನು ತಡೆಯಲು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ.ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆ ಹೆಚ್ಚಿಸಲು NAFED, NCCF ಮತ್ತು ಕೇಂದ್ರೀಯ ಭಂಡಾರ್‌ಗೆ `ಭಾರತ್ ರೈಸ್’ ಅನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಸುಲಭವಾಗಿ `ಭಾರತ್ ಅಕ್ಕಿ’ ಕೈ ಸೇರುವಂತೆ ಮಾಡಲು ಹಾಗೂ ವಿತರಣಾ ವ್ಯವಸ್ಥೆ ವಿಸ್ತರಿಸಲು ಈ ಮೂರೂ ಸಂಸ್ಥೆಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.2026-27ನೇ ಸಾಲಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS-D) ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು ಕೇಂದ್ರ ಸರ್ಕಾರ ದ್ವಿಗುಣಗೊಳಿಸಿದೆ. 25 ಲಕ್ಷ ಮೆಟ್ರಿಕ್ ಟನ್ ಇದ್ದುದನ್ನು ಇದೀಗ 50 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸಿದೆ. 2026ರ ಅಕ್ಟೋಬರ್ 31ರವರೆಗೆ ಇ-ಹರಾಜಿನ ಮೂಲಕ ಈಗಾಗಲೇ 25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.