ರಾಮನಗರ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು  ಭೇಟಿ ಮಾಡಿರೋದು ರಾಜಕೀಯ ವ್ಯಭಿಚಾರ ಎಂದ ಸಚಿವ ಬಾಲಕೃಷ್ಣ ವಾಗ್ದಾಳಿ ನಡೆಸಿದರು.    ಸಿಎಂ ಹತ್ತಿರ ಏನೋ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದಿರುವ ಎಂಎಲ್‌ಸಿ ರಾಜೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಬಾಲಕೃಷ್ಣ, ನಮಗೆ ಬೇಕಾದದ್ದನ್ನೆಲ್ಲಾ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಇನ್ನೇನು ಸಿಗಲು ಸಾಧ್ಯವಿಲ್ಲ. ಸ್ವಂತ ಲಾಭಕ್ಕಾಗಿ ಆಲೋಚನೆ ಮಾಡುವ ರಾಜೇಂದ್ರ ಅವರಿಗೆ ಹಾಗೆ ಅನಿಸುತ್ತಿದೆ. ನಾವು ಪಕ್ಷದ ಹಿತದೃಷ್ಟಿಯಿಂದ ಮಾತಾಡ್ತಿದ್ದೀವಿ. ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ಇವರ ಉದ್ದೇಶವೇನು? ದೇವೇಗೌಡರನ್ನು ನಾಲ್ಕು ಜನ ಹೊತ್ಕೊಂಡು ಹೋಗ್ತಾರೆ ಎಂದು ಹಿಂದೆ ಇದೇ ರಾಜಣ್ಣ ಅಂದಿದ್ದರು. ಈಗ ದಿಢೀರ್ ಎಂದು ಕುಮಾರಸ್ವಾಮಿ, ದೇವೇಗೌಡರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿರುವುದು ರಾಜಕೀಯ ವ್ಯಭಿಚಾರ ಅಲ್ವೇ ಎಂದು ವಾಗ್ದಾಳಿ ನಡೆಸಿದರು.  ತಮಗೆ ಐದು ವರ್ಷ ಸಂಪೂರ್ಣ ಅಧಿಕಾರ ಕೊಡಿ ಎಂಬ ಹೆಚ್.ಡಿ.ಕುಮಾರಸ್ವಾಮಿ  ಹೇಳಿಕೆ ಕುರಿತು ಕನಕಪುರದಲ್ಲಿ  ಪ್ರತಿಕ್ರಿಯೆ ನೀಡಿಕುಮಾರಸ್ವಾಮಿ ಕೇಳಿದ ತಕ್ಷಣ ಜನ 5 ವರ್ಷ ಅಧಿಕಾರ ಕೊಟ್ಟುಬಿಡ್ತಾರಾ? ಅವರ ಪಕ್ಷವೇನಾದರೂ 125 ಸ್ಥಾನ ಗೆದ್ದುಬಿಡುತ್ತಾ? ಇವರು ಕಾಂಗ್ರೆಸ್ ಹತ್ತಿರ ಬಂದ್ರೂ ತ್ಯಾಪೆ, ಬಿಜೆಪಿ ಹತ್ತಿರ ಹೋದ್ರೂ ತ್ಯಾಪೆ ಗಿರಾಕಿ. ಇವರಿಗೆ ಅಧಿಕಾರ ಬಿಟ್ಟುಕೊಟ್ಟು ಸುಮ್ಮನಿರಲು ಬಿಜೆಪಿಯಲ್ಲಿ ಸಿಎಂ ಆಗುವಂತಹ ಗಂಡಸರು ಇಲ್ವಾ ಎಂದು ಪ್ರಶ್ನಿಸಿದರು.ಕೇಂದ್ರದಿಂದ ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರ ಪರಿಹಾರ ಕೇಳಿದೆ ಎಂಬ ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ದೆಹಲಿಗೆ ಹೋಗಿ ಉಲ್ಟಾಪಲ್ಟಾ ನಿಂತುಕೊಳ್ಳಬೇಕಾ? ರಾಜ್ಯದಿಂದ ಪೈಲ್ವಾನ್‌ಗಳನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಲ್ಲ. ಮಾಧ್ಯಮದವರು ಅವರನ್ನೂ ಪ್ರಶ್ನೆ ಮಾಡಬೇಕು. ಕೇಂದ್ರ ಸಚಿವರು ಬರೀ ಮನರಂಜನೆಗೆ ಇದ್ದಾರಾ? ಪ್ರತಿದಿನ ಬೆಳಗ್ಗೆ ಎದ್ದು ಮಾಧ್ಯಮಗಳಿಗೆ ಮನರಂಜನೆ ಕೊಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ. ಇಷ್ಟೆಲ್ಲಾ ಮಾತನಾಡುವವರು ರೈತರ ಬಗ್ಗೆ, ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.ನಾನು ಪ್ರಾಮಾಣಿಕವಾಗಿ ಎಲೆಕ್ಷನ್ ಮಾಡಿದ್ದೇನೋ ಇಲ್ಲವೋ ಎಂದು ಶಾಸಕ ಪುಟ್ಟಣ್ಣ ಅವರನ್ನು ಕೇಳಲಿ. ರಾಜೇಂದ್ರ ಎಲ್ಲೇ ಬರಲಿ, ಅವರ ಮನೆ ದೇವರ ಮುಂದೆ ಬಂದು ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲು ಹಾಕಿದರು.