ನವದೆಹಲಿ :  ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್‌ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್‌ ಗಳ ರೋಚಕ ಗೆಲುವು ಸಾಧಿಸಿದೆ.ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಿತು. 4ರನ್‌ ಗಳ ರೋಚಕ ಗೆಲುವಿನ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿತು. ಈ ಗೆಲುವಿನಲ್ಲಿ ಭಾರತದ ವೇಗಿಗಳು ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಯುವ ವೇಗಿ ಗುರ್ನೂರ್ ಬ್ರಾರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರು. ಈ ಯುವ ವೇಗಿಯ ಆಟಕ್ಕೆ ನಾಯಕ ಶುಭ್​ಮನ್ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವ ಪಡೆದಂತೆ ಬ್ರಾರ್ ಮತ್ತಷ್ಟು ಸ್ಥಿರ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.4 ವಿಕೆಟ್ ಕಬಳಿಸಿದ ಗುರ್ನೂರ್ ಈ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ತಮ್ಮ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. 10 ಓವರ್‌ಗಳಲ್ಲಿ 30 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆಯ ಬೆನ್ನೆಲುಬು ಮುರಿದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವನ್ನು ಭಾರತ 41 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿತು. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡಿದ ಬ್ರಾರ್, ಬಳಿಕ ಟಾಮ್ ಲಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಸತತ ಓವರ್‌ಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ನಾಥನ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ತಮ್ಮ ನಾಲ್ಕು ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು.