ಚೆನ್ನೈ : ಭಾರತ ಮತ್ತು ಮ್ಯಾನ್ಮಾರ್ ರಕ್ಷಣಾ ಪಡೆಗಳ ನಡುವೆ ಆಯೋಜಿಸಲಾದ ಮೊದಲ ದ್ವಿಪಕ್ಷೀಯ ತ್ರಿ-ಸೇವಾ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಅಭ್ಯಾಸವಾದ ‘ರಾಹತ್ ಮಿತ್ರ’ವು   ಚೆನ್ನೈನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.   ಎರಡು ದಿನಗಳ ಅಭ್ಯಾಸದಲ್ಲಿ ಭಾರತೀಯ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಯೋಧರೊಂದಿಗೆ ಮ್ಯಾನ್ಮಾರ್ ರಕ್ಷಣಾ ಪಡೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಉಭಯ ದೇಶಗಳ ರಕ್ಷಣಾ ಪಡೆಗಳ ನಡುವೆ ಕಾರ್ಯಾಚರಣೆಯ ಪರಸ್ಪರ ಹೊಂದಾಣಿಕೆ (interoperability) ಸಾಮರ್ಥ್ಯವನ್ನು ಹೆಚ್ಚಿಸುವುದು, ಪರಸ್ಪರ ಸಮನ್ವಯತೆಯನ್ನು ಬಲಪಡಿಸುವುದು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಉತ್ತಮ ಕಾರ್ಯಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಅಭ್ಯಾಸದ ಮುಖ್ಯ ಉದ್ದೇಶವಾಗಿತ್ತು.ಸಂಯುಕ್ತ ಯೋಜನೆ ಮತ್ತು ವಿಪತ್ತು ನಿರ್ವಹಣೆಯ ಕುರಿತು ಸಮಾಲೋಚನೆಅಭ್ಯಾಸದ ಮೊದಲ ದಿನದಂದು ಜಂಟಿ ಯೋಜನೆ ರೂಪಿಸುವುದು ಮತ್ತು ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಸಾಮರ್ಥ್ಯಗಳ ಪರಿಚಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ತೀವ್ರ ಸ್ವರೂಪದ ಚಂಡಮಾರುತದ ಕಾಲ್ಪನಿಕ ಪರಿಸ್ಥಿತಿಯ ಆಧಾರದ ಮೇಲೆ ನಡೆಸಿದ ಟೇಬಲ್-ಟಾಪ್ ಅಭ್ಯಾಸದ ಮೂಲಕ ಉಭಯ ದೇಶಗಳ ಪ್ರತಿನಿಧಿಗಳು ಸಮನ್ವಯ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ಜಂಟಿ ವಿಪತ್ತು ನಿರ್ವಹಣಾ ಶಿಷ್ಟಾಚಾರಗಳ ಕುರಿತು ಚರ್ಚಿಸಿದರು. ಈ ವೇಳೆ ಭಾಗವಹಿಸುವವರು ಭಾರತೀಯ ಭೂಸೇನೆಯ ತಡೆಗಳನ್ನು ನಿವಾರಿಸುವ ಹಾಗೂ ಸೇತುವೆ ನಿರ್ಮಿಸುವ ಸಾಮರ್ಥ್ಯವನ್ನು ವೀಕ್ಷಿಸಿದರು. ಇದರೊಂದಿಗೆ ಭಾರತೀಯ ನೌಕಾಪಡೆಯ ಹಡಗು ಆಧಾರಿತ ವಿಪತ್ತು ಪರಿಹಾರ ಸಾಮರ್ಥ್ಯಗಳ ಬಗ್ಗೆ ತಿಳಿದುಕೊಳ್ಳಲು 'INS ಸುಕನ್ಯಾ' ನೌಕೆಗೂ ಭೇಟಿ ನೀಡಿದರು.ಸಮುದ್ರ, ಭೂಮಿ ಮತ್ತು ವಾಯು ಕ್ಷೇತ್ರದಲ್ಲಿ ಜಂಟಿ ಸಾಮರ್ಥ್ಯ ಪ್ರದರ್ಶನಅಭ್ಯಾಸದ ಎರಡನೇ ದಿನ ಭಾರತೀಯ ರಕ್ಷಣಾ ಪಡೆಗಳು ತಮ್ಮ ಬಹು-ಕ್ಷೇತ್ರೀಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮರ್ಥ್ಯಗಳನ್ನು ಪ್ರದರ್ಶಿಸಿದವು. ಸಮುದ್ರ, ಭೂಮಿ ಮತ್ತು ವಾಯು ಕ್ಷೇತ್ರಗಳಲ್ಲಿ ಪರಸ್ಪರ ಸಮನ್ವಯತೆಯೊಂದಿಗೆ ವಿಪತ್ತು ತುರ್ತು ಪ್ರತಿಕ್ರಿಯೆ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವನ್ನು ಇಲ್ಲಿ ತೋರಿಸಲಾಯಿತು. ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಕಮಾಂಡ್ ಹಾಗೂ ನಿಯಂತ್ರಣಕ್ಕಾಗಿ 'INS ಅಡ್ಯಾರ್' ಮತ್ತು ಚೆನ್ನೈನಲ್ಲಿರುವ ಸಂವಹನ ಜಾಲ ಕೇಂದ್ರವು ಕರಾವಳಿ ವಿಪತ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ಸಂವಹನ ಮೂಲಸೌಕರ್ಯವನ್ನು ಪ್ರದರ್ಶಿಸಿದವು. ಹಾಗೆಯೇ ಚೆನ್ನೈನ ಮಿಲಿಟರಿ ಆಸ್ಪತ್ರೆಯು ಪ್ರಾದೇಶಿಕ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರ ಶಿಬಿರಗಳ ಸಮನ್ವಯ ನಿರ್ವಹಣಾ ಪ್ರಕ್ರಿಯೆಯ ಬಗ್ಗೆ ಪ್ರತಿನಿಧಿಗಳಿಗೆ ಮಾಹಿತಿ ನೀಡಿತು.ನೌಕಾಪಡೆ ಮತ್ತು ವಾಯುಪಡೆಯಿಂದ ಶೋಧ ಹಾಗೂ ರಕ್ಷಣಾ ಸಾಮರ್ಥ್ಯಗಳ ಪ್ರದರ್ಶನಭಾರತೀಯ ನೌಕಾಪಡೆಯ ಪ್ರವಾಹ ಪರಿಹಾರ ತಂಡಗಳು (FRT) ಪ್ರವಾಹ ತುರ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಬಳಸುವ ವಿಶೇಷ ಉಪಕರಣಗಳು ಮತ್ತು ತಮ್ಮ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಪ್ರದರ್ಶಿಸಿದವು. ಇದರೊಂದಿಗೆ ಕಡಲ ಶೋಧ ಮತ್ತು ರಕ್ಷಣಾ (SAR) ಕಾರ್ಯಾಚರಣೆಯ ಸಾಮರ್ಥ್ಯಗಳನ್ನೂ ಸಹ ಪ್ರದರ್ಶಿಸಲಾಯಿತು. ಇದರಲ್ಲಿ ಚೇತಕ್ ಹೆಲಿಕಾಪ್ಟರ್ ಮತ್ತು 'INS ಬಿತ್ರಾ' ಜಂಟಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದವು.ಭಾರತೀಯ ವಾಯುಪಡೆಯು ಗಾಯಾಳುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಸಂದರ್ಭದಲ್ಲಿ ಮ್ಯಾನ್ಮಾರ್ ಪ್ರತಿನಿಧಿ ಮಂಡಳಿಯ ಕಮಾಡೋರ್ ಆಂಗ್ ನ್ಯಾಂಗ್ ವಿನ್ ಸೇರಿದಂತೆ ಇಬ್ಬರು ಅಧಿಕಾರಿಗಳು ವಾಯು ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯ ALH ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು.ಪರಸ್ಪರ ತಿಳಿವಳಿಕೆ ಮತ್ತು ಕಾರ್ಯಾಚರಣಾ ಸಮನ್ವಯಕ್ಕೆ ಉತ್ತೇಜನ‘ರಾಹತ್ ಮಿತ್ರ’ ಅಭ್ಯಾಸವು ಉಭಯ ದೇಶಗಳ ರಕ್ಷಣಾ ಪಡೆಗಳಿಗೆ ತಮ್ಮ ಕಾರ್ಯಾಚರಣಾ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಉತ್ತಮ ಕಾರ್ಯಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ಪ್ರಮುಖ ಅವಕಾಶ ಕಲ್ಪಿಸಿಕೊಟ್ಟಿತು. ಇದರ ಮೂಲಕ ವಿಪತ್ತು ಪರಿಹಾರ ಕಾರ್ಯಾಚರಣೆಗಳ ಯೋಜನೆ ರೂಪಿಸುವ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಪರಸ್ಪರ ತಿಳಿವಳಿಕೆ ಗಟ್ಟಿಯಾಗಿದೆ. ಅಲ್ಲದೆ, ಉಭಯ ದೇಶಗಳ ರಕ್ಷಣಾ ಪಡೆಗಳಿಗೆ ಪರಸ್ಪರರ ಸಾಮರ್ಥ್ಯಗಳು, ಪ್ರಕ್ರಿಯೆಗಳು ಮತ್ತು ಕಾರ್ಯಪದ್ಧತಿಗಳನ್ನು ಹತ್ತಿರದಿಂದ ಅರಿಯಲು ಇದು ಸಹಕಾರಿಯಾಗಿದೆ.