ಮೈಸೂರು:  ಭಾರತೀಯ ಭಾಷಾ ಸಂಸ್ಥಾನದ (CIIL) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ (CESCK) ನೂತನ ಯೋಜನಾ ನಿರ್ದೇಶಕರಾಗಿ ಪ್ರೊ. ಕೆ. ರವೀಂದ್ರನಾಥ ಅವರು ನೇಮಕಗೊಂಡಿದ್ದು,   ಕೇಂದ್ರದಲ್ಲಿ ಕಾರ್ಯವರದಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ  ಪ್ರೊ. ಬಸವರಾಜ ಕೋಡಗುಂಟಿ, ಭಾರತೀಯ ಭಾಷೆಗಳ ಸಂಯೋಜಕ ದ ಡಾ. ಎಲ್. ಆರ್. ಪ್ರೇಮ್‌ಕುಮಾರ್ ಹಾಗೂ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ  ಪ್ರೊ. ಎನ್. ಎಂ. ತಳವಾರ  ಉಪಸ್ಥಿತರಿದ್ದರು. ಪ್ರೊ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಾಶಾಸ್ತ್ರ, ಪ್ರಾಚೀನ ಕನ್ನಡ ಸಾಹಿತ್ಯ, ದಾಖಲು ಸಾಹಿತ್ಯ, ವಚನ ಸಾಹಿತ್ಯ ಮುಂತಾದವು ಇವರ ವಿಶೇಷ ಅಧ್ಯಯನದ ಆಸಕ್ತಿಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕನ್ನಡ ದಾಖಲು ಸಾಹಿತ್ಯ, ಕನ್ನಡ ಟೀಕಾ ಸಾಹಿತ್ಯ, ಉದ್ಧರಣೆ ಸಾಹಿತ್ಯ ಸೇರಿದಂತೆ ಸಂಶೋಧನೆ ಮತ್ತು ಗ್ರಂಥ ಸಂಪಾದನೆಗೆ ಸಂಬಂಧಿಸಿದ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಶ್ರೀಯುತರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುತ್ತೂರು ಶಿವರಾತ್ರೀಶ್ವರ ಪ್ರಶಸ್ತಿ, ಕರ್ನಾಟಕ ಇತಿಹಾಸ ಅಕಾಡೆಮಿಯ ಸಂಶೋಧನಾಶ್ರೀ ಪ್ರಶಸ್ತಿ, ಪ್ರೊ. ಬಿ. ಎಸ್. ಸಣ್ಣಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಮಂಡ್ಯದ ಕರ್ನಾಟಕ ಸಂಘದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವಕ್ಕೂ ಪಾತ್ರರಾಗಿದ್ದರು.ಇದೇ ಸಂದರ್ಭದಲ್ಲಿ ನೆಲ್ಲೂರಿನ ಪ್ರಾಚೀನ ತೆಲುಗು ವಿಶಿಷ್ಟ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾಗಿ ಪ್ರೊ. ರೆಡ್ಡಿ ಶ್ಯಾಮಲಾ ಯದ್ದನಪುಡಿ ಮತ್ತು ಭುವನೇಶ್ವರದ ಶಾಸ್ತ್ರೀಯ ಒಡಿಯಾ ಉತ್ಕರ್ಷ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾಗಿ ಪ್ರೊ. ಪ್ರಸನ್ನ ಕುಮಾರ್ ಸ್ವೈನ್ ಅವರು ಕೂಡ ಆಯ್ಕೆಯಾಗಿದ್ದಾರೆ ಎಂಬುದಾಗಿ ಭಾರತೀಯ ಭಾಷಾ ಸಂಸ್ಥಾನದ ಪ್ರಕಟಣೆಯು ತಿಳಿಸಿದೆ.