ಬೆಂಗಳೂರು :  ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ  ಮಹತ್ವದ ಸಭೆ ನಡೆಯಿತು, ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ  ಚರ್ಚಿಸಲಾಯಿತು.ಸಿಎಂ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ, ಒಗ್ಗಟ್ಟಿನಿಂದ ಏನನ್ನಾದರೂ ಸಾಧಿಸಬಹುದು. ಸರ್ಕಾರದ ಜನಪರ ಕೆಲಸಗಳ ಯಶಸ್ಸಿಗೂ ಇದೇ ಒಗ್ಗಟ್ಟು ಮುಖ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿ, ವರ್ಗಗಳ ಬಲ ಮತ್ತು ವಿಶ್ವಾಸ ನಮಗೆ ಮುಖ್ಯ. ಎಲ್ಲ ಸಮುದಾಯಗಳನ್ನು ಬಲಪಡಿಸುವ ಕೆಲಸವಾಗಬೇಕು ಎಂದರು.ನಿಮ್ಮ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆಯಲು ನಾನು ಮುಕ್ತ ಮನಸ್ಸಿನಿಂದ ಇದ್ದೇನೆ. ಇದು ನಿಮ್ಮದೇ ಸರ್ಕಾರ, ನಿಮ್ಮದೇ ಕಾರ್ಯಕ್ರಮ. ಪರಿಶಿಷ್ಟರ ಕಲ್ಯಾಣಕ್ಕಾಗಿ ಉತ್ತಮವಾಗಿ ಕೆಲಸ ಮಾಡಿ. ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಹಕಾರ ನೀಡುತ್ತೇನೆ. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಹೆಸರು ತರುವಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳು ಹಾಗೂ ಸಂವಿಧಾನದ ಆಶಯ ಮತ್ತು ಚೌಕಟ್ಟಿನಲ್ಲಿ ಪರಿಶಿಷ್ಟ ಸಮುದಾಯಗಳ ಪ್ರಗತಿಗೆ ಶ್ರಮಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನದ ಬಳಕೆ ಪಾರದರ್ಶಕವಾಗಿರಬೇಕು. ಆ ಅನುದಾನದಿಂದ ಉತ್ತಮ ಕೆಲಸಗಳು ಆಗಬೇಕು. ಇದರ ಜತೆಗೆ ಎಲ್ಲ ಜಾತಿ, ವರ್ಗಗಳ ವಿಶ್ವಾಸ ಗಳಿಸಬೇಕು ಎಂದರು.ಸಂಘಟನೆ ಮೊದಲು, ಪಕ್ಷ ಮೊದಲು. ಸರ್ಕಾರದ ಕೆಲಸಗಳು ಪಕ್ಷಕ್ಕೆ ಹೆಸರು ತರುವಂತಿರಬೇಕು. ಗ್ಯಾರಂಟಿ ಯೋಜನೆಗಳು ಸೇರಿದಂತೆ ಜನಪರ ಯೋಜನೆಗಳು ಸರ್ಕಾರಕ್ಕೆ ಜನಮನ್ನಣೆ ತಂದುಕೊಡಬೇಕು. ಸಕಾರಾತ್ಮಕವಾಗಿ ಯೋಚಿಸಿ, ಸಕಾರಾತ್ಮಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ   ಕೆ.ಹೆಚ್. ಮುನಿಯಪ್ಪ,   ಎಂ.ಬಿ. ಪಾಟೀಲ್,   ರಾಮಲಿಂಗಾರೆಡ್ಡಿ,   ಈಶ್ವರ್ ಖಂಡ್ರೆ,  ಸತೀಶ್ ಜಾರಕಿಹೊಳಿ,   ಲಕ್ಷ್ಮಣ್ ಸವದಿ,  ಚಲುವರಾಯಸ್ವಾಮಿ,   ಕೃಷ್ಣ ಬೈರೇಗೌಡ,   ಪ್ರಿಯಾಂಕ್ ಖರ್ಗೆ,   ಯತೀಂದ್ರ ಸಿದ್ದರಾಮಯ್ಯ,   ನರೇಂದ್ರಸ್ವಾಮಿ,   ರಘುಮೂರ್ತಿ,   ಬಸವಂತಪ್ಪ, ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರರಾದ ಡಾ. ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರು ಹಾಗೂ ಶಾಸಕ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.