ವಿದ್ಯುತ್ ಇಲ್ಲದೆ ಕತ್ತಲಲ್ಲಿ ಡಾ.ರಾಜಕುಮಾರ್ ಕಲಾಮಂದಿರ!
ಹತ್ತು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತ : ಸಾರ್ವಜನಿಕರು, ಕಲಾವಿದರು ಹಾಗೂ ಕಾರ್ಯಕ್ರಮ ಆಯೋಜಕರ ಆಕ್ರೋಶ

ಚಾಮರಾಜನಗರ : ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬೆಳೆಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ವರನಟ ಡಾ.ರಾಜಕುಮಾರ್ ಜಿಲ್ಲಾ ಕಲಾಮಂದಿರವೇ ಕಳೆದ ಹತ್ತು-ಹನ್ನೆರಡು ದಿನಗಳಿಂದ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲಲ್ಲಿ ಮುಳುಗಿದ್ದು, ಸಾರ್ವಜನಿಕರು, ಕಲಾವಿದರು ಹಾಗೂ ಕಾರ್ಯಕ್ರಮ ಆಯೋಜಕರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿಯೂ ಕಳೆದ ಸುಮಾರು 15 ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿದೆ. ಇಲಾಖೆಯ ಅಧೀನದಲ್ಲಿರುವ ಡಾ.ರಾಜಕುಮಾರ್ ಕಲಾಮಂದಿರದಲ್ಲೂ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸುವ ಸಂಘ-ಸಂಸ್ಥೆಗಳು ಹಾಗೂ ಕಲಾವಿದರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಸಲು ಸಂಘ-ಸಂಸ್ಥೆಗಳು ಬಾಡಿಗೆ ಪಾವತಿಸಿ ಸಭಾಂಗಣ ಪಡೆಯುತ್ತಿದ್ದರೂ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿದ್ಯುತ್ ಸಂಪರ್ಕ ಇಲ್ಲದಿರುವುದು, ವಿದ್ಯುತ್ ಕೈಕೊಟ್ಟಾಗ ಪರ್ಯಾಯ ಜನರೇಟರ್ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯಗಳಲ್ಲಿ ಸ್ವಚ್ಛತೆ ಕೊರತೆ ಹಾಗೂ ಸಭಾಂಗಣದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.ಕಲಾವಿದರು ತಮ್ಮ ಕಲಾ ಪ್ರದರ್ಶನಗಳನ್ನು ನಡೆಸಲು ಸೂಕ್ತ ವಾತಾವರಣವಿಲ್ಲದೆ ಪರದಾಡುವಂತಾಗಿದೆ. ಕಲೆಗೆ ಗೌರವ ನೀಡಬೇಕಾದ ಕಲಾಮಂದಿರದಲ್ಲೇ ಕಲಾವಿದರು ಇಂತಹ ಮೂಲಸೌಕರ್ಯಗಳ ಕೊರತೆಯಿಂದ ಮುಜುಗರ ಅನುಭವಿಸುವಂತಾಗಿದೆ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮೇರಾ ಯುವ ಭಾರತ್, ಚಾಮರಾಜನಗರ ಕಚೇರಿಯಿಂದ ಆಯೋಜಿಸಿದ್ದ 'ವಿಕಸಿತ ಭಾರತ್ ಯಂಗ್ ಲೀಡರ್ ಬೂತ್ ಪಾರ್ಲಿಮೆಂಟ್-2027' ಕಾರ್ಯಕ್ರಮದಲ್ಲಿಯೂ ವಿದ್ಯುತ್ ಸಮಸ್ಯೆ ಎದುರಾಯಿತು. ಸುಮಾರು ಒಂದು ಗಂಟೆಯಾದರೂ ಕಾರ್ಯಕ್ರಮ ಆರಂಭವಾಗದೆ, ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರು ಕತ್ತಲಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದಾಗ, ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಹತ್ತು ದಿನಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.ಕತ್ತಲಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕಾದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಕಲಾಮಂದಿರವನ್ನು ಬಾಡಿಗೆಗೆ ನೀಡುವಾಗ ಕಾರ್ಯಕ್ರಮ ಆಯೋಜಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಕಲಾವಿದರು ಹಾಗೂ ಸಂಘ-ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಡಾ.ರಾಜಕುಮಾರ್ ಕಲಾಮಂದಿರಕ್ಕೆ ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ಯಾರಿಗೂ ಇಂತಹ ತೊಂದರೆ ಎದುರಾಗದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಲಾಮಂದಿರಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕಲಾವಿದರು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಂಬಂಧಿತ ಸುದ್ದಿಗಳು

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ : ಪ್ರಧಾನಿ ಮುಂದೆ ರಾಜ್ಯದ ಬೇಡಿಕೆಗಳನ್ನಿಟ್ಟ ಸಿಎಂ ಡಿ. ಕೆ. ಶಿವಕುಮಾರ್
ಮೈಸೂರು : "ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮತಿ ನೀಡಬೇಕು. ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿ…
◷ 13/11/2026
ಮನೆ ಮನೆಗೆ ಗ್ಯಾರಂಟಿ ಸಮೀಕ್ಷೆ : ಮೃತಪಟ್ಟವರ ಹೆಸರಿನಲ್ಲಿಯೂ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಪರಿಶೀಲನೆ
ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೇ ಎಂಬುದನ್ನು ಖಚ…
◷ 13/11/2026
ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯ ಉದ್ಘಾಟಿಸಿದ ನಮೋ!
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದು ನಗರದಲ್ಲಿ ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯವನ್ನು ಉದ್ಘಾಟಿಸಿದರು.ಬಳಿಕ ಮಾ…
◷ 13/11/2026
ಪಿಎಂ ಸ್ವಾಗತಿಸಿದ ಸಿಎಂ
ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣ…
◷ 13/11/2026
