ಬೆಂಗಳೂರು : ಹಿರಿಯೂರು ವಿಧಾನಸಭಾ ಕ್ಷೇತ್ರದ  ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್‌ ನ ನಿರ್ಧಾರವೇ ಅಂತಿಮವಾಗಿದ್ದು, ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಅಥವಾ ಗೊಂದಲವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಸ್ಪಷ್ಟಪಡಿಸಿದ್ದಾರೆ.ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯೂರು ಟಿಕೆಟ್ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾವು ಮತ್ತು ಜೆಡಿಎಸ್ ಎನ್‌ಡಿಎ  ಮೈತ್ರಿಕೂಟದ ಪಾಲುದಾರರು. ಟಿಕೆಟ್ ಕೇಳುವ ಅಧಿಕಾರ ಅವರಿಗೂ ಇದೆ, ನಮಗೂ ಇದೆ. ಈ ಹಿಂದೆ ಬಿಜೆಪಿ ಇಲ್ಲಿ ಗೆದ್ದಿತ್ತು ಹಾಗೂ ಎರಡನೇ ಸ್ಥಾನವನ್ನೂ ಪಡೆದಿತ್ತು. ಜೆಡಿಎಸ್  ಕೂಡ ಹಿಂದೆ ಗೆಲುವು ಸಾಧಿಸಿತ್ತು. ಟಿಕೆಟ್ ವಿಚಾರವಾಗಿ ನಾವು ಯಾವುದೇ ಜಗಳ ಮಾಡುವುದಿಲ್ಲ. ಕಳೆದ 15 ವರ್ಷಗಳ ಮತದಾನದ ಅಂಕಿಅಂಶಗಳು ಮತ್ತು ಸಮೀಕ್ಷೆಗಳನ್ನು ಆಧರಿಸಿ, ಸಮನ್ವಯ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗುವುದು. ಈ ಮೂಲಕ ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.