ಬೆಂಗಳೂರು :  ರಾಜ್ಯಕ್ಕೆ ನೀಡಬೇಕಾದ ಅನುದಾನ ಬಿಡುಗಡೆ ವಿಚಾರದಲ್ಲಿ   ರಾಜ್ಯ ಸರ್ಕಾರ ಎರಡನೇ ಬಾರಿ ಕೇಂದ್ರದ ವಿರುದ್ಧದ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದೆ.ಸಿದ್ದರಾಮಯ್ಯನರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಸುಪ್ರೀಂಕೋರ್ಟ್​ಗೆ ಹೋಗಿದ್ದ ರಾಜ್ಯ ಸರ್ಕಾರ, ಈಗಲೂ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಮತ್ತೊಮ್ಮೆ ಸುಪ್ರೀಂ ಕದ ತಟ್ಟಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.ಈ ಕುರಿತು ಇಂದು ವಿಕಾಸಸೌಧದಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, 15ನೇ ಹಣಕಾಸು ಆಯೋಗದಿಂದ 4 ವರ್ಷ ಹಣ ಬಂದಿದೆ, 5ನೇ ವರ್ಷದ ಹಣ ಬಂದಿಲ್ಲ, ಕೇಂದ್ರ ಸರ್ಕಾರ 2,186 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ತಾಂತ್ರಿಕ ದೋಷದ ನೆಪದಿಂದ ಹಣ ಬಿಡುಗಡೆ ಆಗಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.ಅನುದಾನ ಬಿಡುಗಡೆ ವಿಚಾರವಾಗಿ ಮಂತ್ರಿಗಳು, ಅಧಿಕಾರಿಗಳು ದೆಹಲಿಗೂ ಹೋಗಿ ಬಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ. ನಾನೂ ಕೂಡ ದೆಹಲಿಗೆ ಹೋಗಿ ಭೇಟಿ ಮಾಡಿ ಹಣ ಬಿಡುಗಡೆಗಾಗಿ ಮನವಿ ಮಾಡಿದ್ದೇನೆ. ಅಸ್ಸಾಂ, ಗುಜರಾತ್ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಉತ್ತರಾಖಂಡಕ್ಕೂ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಕರ್ನಾಟಕಕ್ಕೆ ಮಾತ್ರ ಷರತ್ತು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.ಕೇಂದ್ರ ಸರ್ಕಾರ, ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಅವರು, ಕೇಂದ್ರದ ಜೊತೆಗೆ ಸಂಘರ್ಷಕ್ಕೆ ನಮಗೆ ಇಷ್ಟ ಇಲ್ಲ. ಆದ್ರೆ ರಾಜ್ಯಕ್ಕೆ ನ್ಯಾಯ ಸಿಗಬೇಕು. ಅಡ್ವಕೇಟ್ ಜನರಲ್ ಜೊತೆಗೆ ಸಭೆ ಮಾಡಲಾಗಿದೆ. ಸುಪ್ರೀಂಕೋರ್ಟ್​ಗೆ ರಿಟ್ ಪಿಟಿಷನ್ ಹಾಕಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.