ಬೆಂಗಳೂರು:  ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಭಾಗವಹಿಸಿದರು.ಈ ಸಂದರ್ಭ ಮಾತನಾಡಿದ ಅವರು ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಕೇವಲ ಸಂವಿಧಾನದಲ್ಲಿ ನೀಡಿರುವ ಭರವಸೆಯಾಗಿ ಉಳಿಯಬಾರದು. ಆಡಳಿತದಲ್ಲಿ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ನಿಜವಾದ ಪಾಲುದಾರಿಕೆ ದೊರೆಯಬೇಕು. ಮಹಿಳೆಯರಿಗೆ ನಾಯಕತ್ವ ವಹಿಸುವ ಸಾಮರ್ಥ್ಯವಿದೆಯೇ ಎಂಬುದು ಇಂದು ನಮ್ಮ ಮುಂದಿರುವ ಪ್ರಶ್ನೆಯಲ್ಲ. ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಮಹಿಳೆಯರೊಂದಿಗೆ ಅಧಿಕಾರ ಹಂಚಿಕೊಳ್ಳುವ ಧೈರ್ಯವನ್ನು ನಮ್ಮ ಸಾಂಸ್ಥಿಕ ರಚನೆಗಳು ತೋರಿವೆಯೇ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಈ ಸಮ್ಮೇಳನವು ಕೇವಲ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸುವ ಕಾರ್ಯಕ್ರಮವಲ್ಲ. ಸಮಾನತೆ, ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಮಹತ್ವದ ವೇದಿಕೆಯಾಗಿದೆ ಎಂದರು. ಮಹಿಳಾ ಜನಪ್ರತಿನಿಧಿಗಳಿಗೆ ಶಾಸನಸಭೆಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ವಿಶ್ವಾಸಾರ್ಹ ಸಂಶೋಧನಾ ನೆರವು, ಸುರಕ್ಷಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆ, ಸಾಧ್ಯವಿರುವ ಕಡೆಗಳಲ್ಲಿ ಕುಟುಂಬದ ಜವಾಬ್ದಾರಿಗಳಿಗೂ ಅನುಕೂಲವಾಗುವಂತಹ ಸದನದ ಕಾರ್ಯವಿಧಾನಗಳು, ಮಕ್ಕಳ ಆರೈಕೆಗೆ ಸೂಕ್ತ ಸೌಲಭ್ಯಗಳು ಹಾಗೂ ಕಿರುಕುಳದ ವಿರುದ್ಧ ಪರಿಣಾಮಕಾರಿ ದೂರು ಮತ್ತು ಪರಿಹಾರ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದರ ಜೊತೆಗೆ ಪ್ರಮುಖ ಶಾಸನಸಭಾ ಸಮಿತಿಗಳ ಅಧ್ಯಕ್ಷತೆಯನ್ನು ಮಹಿಳೆಯರಿಗೆ ವಹಿಸಲು ಹೆಚ್ಚಿನ ಅವಕಾಶಗಳನ್ನು ನೀಡಬೇಕು. ವಿಶೇಷವಾಗಿ ರಾಜಕೀಯ ಹಿನ್ನೆಲೆಯ ಕುಟುಂಬಗಳಿಂದ ಬಾರದ ಹಾಗೂ ಹೆಚ್ಚಿನ ಆರ್ಥಿಕ ಸಂಪನ್ಮೂಲಗಳಿಲ್ಲದ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಿ, ಇತರರಂತೆ ಸಮಾನ ಅವಕಾಶಗಳೊಂದಿಗೆ ನಾಯಕತ್ವ ವಹಿಸುವಂತಾಗಲು ಇಂತಹ ವ್ಯವಸ್ಥೆಗಳು ಅತ್ಯಂತ ಅಗತ್ಯವಾಗಿವೆ ಎಂದು ತಿಳಿಸಿದರು.