ಬೆಂಗಳೂರು :   ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯ ₹2,600 ಕೋಟಿಗೂ ಅಧಿಕ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಹಾಗೂ ಸರ್ಕಾರದ ಬಳಿ ಹಣವಿಲ್ಲದೆ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಲೋಪದೋಷಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು. 'ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೊದಲ ವರ್ಷ ಫಲಾನುಭವಿ ಮಹಿಳೆಯರಿಗೆ ಕೇವಲ 8 ತಿಂಗಳು ಮಾತ್ರ ಹಣ ನೀಡಲಾಗಿದೆ. ಸರಿಯಾಗಿ ಹಣ ಬಿಡುಗಡೆಯಾಗದ ಕಾರಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಲಿಖಿತ ಅಫಿಡವಿಟ್ ಸಲ್ಲಿಸದೆ, ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದೆ. ಆಕ್ಷೇಪಣೆಯಲ್ಲಿ ಹಣಕಾಸಿನ ಕೊರತೆಯಿಂದಾಗಿ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ. ಇದರರ್ಥ ಸರ್ಕಾರ ಬಳಿ ಹಣವಿಲ್ಲ, ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?' ಎಂದು ಪ್ರಶ್ನಿಸಿದರು.ಬೆಂಗಳೂರಿನಲ್ಲಿ  ಚುನಾವಣೆ ಸಮಯದಲ್ಲಿ ರಾಜ್ಯದ 1.27 ಕೋಟಿ ಮಹಿಳೆಯರಿಗೆ "ನಿಮ್ಮ ಹಕ್ಕು" ಎಂದು ₹2,000 ರೂ. ಮಾಸಿಕ ಗೃಹಲಕ್ಷ್ಮಿ ಯೋಜನೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ರಾಜ್ಯದ ಬೊಕ್ಕಸವನ್ನು ಸಂಪೂರ್ಣವಾಗಿ ದಿವಾಳಿ ತೆಗೆದು ತಾಯಂದಿರಿಗೆ ಬೆನ್ನಿಗೆ ಚೂರಿ ಹಾಕಿದೆ ಎಂದರು. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಸರ್ಕಾರ ಸಂಪೂರ್ಣವಾಗಿ ಬಾಕಿ ಉಳಿಸಿಕೊಂಡಿದೆ. ಪ್ರತಿಯೊಬ್ಬ ಫಲಾನುಭವಿ ತಾಯಿಗೆ ₹4,000 ರೂ. ಅಂದರೆ ಒಟ್ಟು ₹5,000 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಬಿಡುಗಡೆ ಮಾಡದೇ ವಂಚಿಸಿದೆ ಎಂದು ಆರೋಪಿಸಿದರು.ವಿಧಾನಸಭೆಯಲ್ಲಿ ಸಚಿವೆ   ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ತಲುಪದಿರಲು "ಸರ್ವರ್ ಸಮಸ್ಯೆ", "ತಾಂತ್ರಿಕ ದೋಷ" ಕಾರಣ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳಿದ್ದರು. ಆದರೆ, ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಆರ್ಥಿಕ ಇಲಾಖೆಯೇ ಸಲ್ಲಿಸಿದ ಆಕ್ಷೇಪಣೆ ಪತ್ರದಲ್ಲಿ "ಹಣಕಾಸಿನ ತೀವ್ರ ಅಭಾವದಿಂದ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ" ಎಂದು ಖಜಾನೆ ಖಾಲಿಯಾಗಿರುವುದನ್ನು ಒಪ್ಪಿಕೊಂಡಿದೆ ಎಂದರು.  ಚುನಾವಣೆಯಲ್ಲಿ "ಗ್ಯಾರಂಟಿ" ಎಂದು ಮನೆ ಮನೆಗೆ ಬಂದು ಕಾರ್ಡ್ ಹಂಚಿದ ಕಾಂಗ್ರೆಸ್, ಹೈಕೋರ್ಟ್ ಅಫಿಡವಿಟ್‌ನಲ್ಲಿ "ಸಂಕ್ಷೇಮ ಯೋಜನೆಗಳು ಪ್ರಜೆಗಳ ಕಾನೂನಾತ್ಮಕ ಹಕ್ಕಲ್ಲ, ಹಣಕಾಸಿನ ಅಭಾವವಿದ್ದಾಗ ಸರ್ಕಾರ ನೀಡದಿರಲು ಸ್ವತಂತ್ರವಾಗಿದೆ ಮತ್ತು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಫಲಾನುಭವಿಗಳಿಗೆ ಹಕ್ಕಿಲ್ಲ" ಎಂದು ವಾದಿಸಿದೆ.ಮಾರ್ಚ್ 31, 2025 ರಂದು ಅನುದಾನ ಲ್ಯಾಪ್ಸ್ ಆಗುತ್ತದೆ ಎಂಬ ಕಾರಣಕ್ಕೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ₹2,660.26 ಕೋಟಿ ಸಾರ್ವಜನಿಕ ಖಜಾನೆಯ ಹಣವನ್ನು ನೇರ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ನಿಂದ ಎಳೆದು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ  ಖಾಸಗಿ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಜಮಾ ಮಾಡಲಾಗಿದೆ.    ಶಾಸನಸಭೆಗೆ ಸುಳ್ಳು ಹೇಳಿ, ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆದು, ರಾಜ್ಯದ 1.26 ಕೋಟಿಗೂ ಹೆಚ್ಚು ತಾಯಂದಿರಿಗೆ ವಂಚಿಸಿರುವ ಈ ಸರ್ಕಾರ ಕೂಡಲೇ ಬಾಕಿ ಇರುವ ಎಲ್ಲಾ ಕಂತುಗಳ ₹5,000 ಕೋಟಿ ಹಣವನ್ನು ಮಹಿಳೆಯರ ಖಾತೆಗೆ ತಕ್ಷಣ ಬಿಡುಗಡೆ ಮಾಡಬೇಕು.ನಾಡಿನ ಜನತೆಗೆ ಮತ್ತು ತಾಯಂದಿರಿಗೆ ನ್ಯಾಯ ಸಿಗುವವರೆಗೂ ಜನತಾ ದಳ (ಜಾತ್ಯಾತೀತ) ಪಕ್ಷ ಹಾಗೂ ನಾನು ವೈಯಕ್ತಿಕವಾಗಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.