ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಮತ್ತು ಹೊಸ ಆರ್ಡರ್‌ಗಳ ಬೆಂಬಲದಿಂದಾಗಿ ಭಾರತದ ಸೇವಾ ವಲಯವು ಅಕ್ಟೋಬರ್ ತಿಂಗಳಿನಲ್ಲಿ ಕಳೆದ ನಾಲ್ಕು ತಿಂಗಳಲ್ಲೇ ಅತ್ಯಂತ ವೇಗದ ಪ್ರಗತಿಯನ್ನು ದಾಖಲಿಸಿದೆ. ಹೆಚ್‌ ಎಸ್‌ ಬಿಸಿ (HSBC) ಬಿಡುಗಡೆ ಮಾಡಿರುವ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ವರದಿಯ ಪ್ರಕಾರ, ಸೇವಾ ವಲಯದ ಪಿಎಂಐ ಸೆಪ್ಟೆಂಬರ್‌ನಲ್ಲಿದ್ದ 55.2 ರಿಂದ ಅಕ್ಟೋಬರ್‌ನಲ್ಲಿ 55.8 ಕ್ಕೆ ಏರಿಕೆಯಾಗಿದೆ.ಸೌಮ್ಯ ಹಣದುಬ್ಬರ ಮತ್ತು ಗ್ರಾಹಕರ ಬಲವಾದ ಬೆಂಬಲದಿಂದಾಗಿ ದೇಶದ ಸೇವಾ ವಲಯವು ಸತತವಾಗಿ ವಿಸ್ತರಣೆ ಕಾಣುತ್ತಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ. ಉತ್ಪಾದನೆ ಮತ್ತು ಕಾಂಪೊಸಿಟ್ PMI ವಿಸ್ತರಣೆ: ಸೇವಾ ಮತ್ತು ತಯಾರಿಕಾ ವಲಯಗಳನ್ನು ಒಟ್ಟಾಗಿ ಒಳಗೊಂಡಿರುವ ಸಂಯೋಜಿತ (Composite) ಪಿಎಂಐ ಕೂಡ ಸೆಪ್ಟೆಂಬರ್‌ನ 55.9 ರಿಂದ ಅಕ್ಟೋಬರ್‌ನಲ್ಲಿ 56.2 ಕ್ಕೆ ಜಿಗಿದಿದೆ. ಪಿಎಂಐ ಸೂಚ್ಯಂಕವು 50 ಕ್ಕಿಂತ ಹೆಚ್ಚಿದ್ದರೆ ಅದನ್ನು ಆರ್ಥಿಕ ವಿಸ್ತರಣೆ ಎಂದು ಪರಿಗಣಿಸಲಾಗುತ್ತದೆ.ಹಣದುಬ್ಬರ ಶಮನ: ಕಚ್ಚಾವಸ್ತು ಹಾಗೂ ಸೇವಾ ವೆಚ್ಚದ (Input Cost) ಹಣದುಬ್ಬರವು ಆಗಸ್ಟ್ 2020 ರ ನಂತರದ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಸೇವಾ ಪೂರೈಕೆದಾರರು ಗ್ರಾಹಕರಿಂದ ವಸೂಲಿ ಮಾಡುವ ಶುಲ್ಕದ ಏರಿಕೆಯ ದರವೂ ಜೂನ್ ನಂತರ ಅತ್ಯಂತ ಕಡಿಮೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ನಿರಾಳತೆ ತರಲಿದೆ.ದೇಶೀಯ ಬೇಡಿಕೆಯೇ ಆಸರೆ: ದೇಶೀಯ ಮಾರುಕಟ್ಟೆಯಿಂದ ಬಂದ ಬಲವಾದ ಆಫರ್‌ಗಳು ಮತ್ತು ಬೇಡಿಕೆಯೇ ಈ ಬೆಳವಣಿಗೆಗೆ ಮುಖ್ಯ ಕಾರಣ. ಆದರೆ, ಫೆಬ್ರವರಿ 2023 ರ ನಂತರ ರಫ್ತು ಆರ್ಡರ್‌ಗಳ (Export Orders) ಬೆಳವಣಿಗೆ ದರ ಅತ್ಯಂತ ನಿಧಾನಗತಿಯಲ್ಲಿ ಸಾಗಿದೆ.ಆರ್ಥಿಕ ವಲಯಗಳ ಸಾಧನೆ: ಹಣಕಾಸು ಮತ್ತು ವಿಮೆ (Finance & Insurance) ವಲಯವು ಮುಂಚೂಣಿಯಲ್ಲಿದ್ದರೆ, ರಿಯಲ್ ಎಸ್ಟೇಟ್ ಮತ್ತು ಬಿಸಿನೆಸ್ ಸೇವೆಗಳ ವಲಯವು ತುಸು ಹಿಂದುಳಿದಿದೆ.ಉದ್ಯೋಗ ಸೃಷ್ಟಿ ಮಂದಗತಿ: ಕಂಪನಿಗಳು ತಮ್ಮ ಬಾಕಿ ಇರುವ ಕೆಲಸಗಳನ್ನು (Pending work) ವೇಗವಾಗಿ ಪೂರ್ಣಗೊಳಿಸಿದ್ದರಿಂದ, ಅಕ್ಟೋಬರ್‌ನಲ್ಲಿ ಹೊಸ ಉದ್ಯೋಗ ಸೃಷ್ಟಿಯ ವೇಗ ತುಸು ಮಂದಗತಿಯಲ್ಲಿ ಸಾಗಿದೆ.ಭವಿಷ್ಯದ ಬಗ್ಗೆ ಆಶಾವಾದ ಹೆಚ್‌ಎಸ್‌ಬಿಸಿಯ ಮುಖ್ಯ ಭಾರತೀಯ ಅರ್ಥಶಾಸ್ತ್ರಜ್ಞರಾದ ಪ್ರಾಂಜುಲ್ ಭಂಡಾರಿ ಮಾತನಾಡಿ, "ಭಾರತದ ಸೇವಾ ವಲಯದ ಪಿಎಂಐ 55.8 ಕ್ಕೆ ಏರಿದ್ದು, ಉದ್ಯಮದ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಸುಧಾರಣೆ ಕಂಡುಬಂದಿದೆ. ವೆಚ್ಚದ ಒತ್ತಡ ಕಡಿಮೆಯಾಗುತ್ತಿರುವುದು ಭರವಸೆ ಮೂಡಿಸಿದೆ," ಎಂದು ತಿಳಿಸಿದ್ದಾರೆ. ಬರುವ 12 ತಿಂಗಳುಗಳಲ್ಲಿ ಸೇವಾ ವಲಯವು ಇನ್ನಷ್ಟು ಉತ್ತಮ ಪ್ರಗತಿ ಕಾಣಲಿದೆ ಎಂದು ಉದ್ಯಮಗಳು ವಿಶ್ವಾಸ ವ್ಯಕ್ತಪಡಿಸಿವೆ.