ಆಂಕ್ಲೆಂಡ್ : ಈಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ನ್ಯೂಜಿಲೆಂಡ್‌ ತಂಡವನ್ನು ಕೇವಲ 185 ರನ್‌ಗಳಿಗೆ ನಿಯಂತ್ರಿಸಿದೆ. ಭಾರತದ ಪರವಾಗಿ ಮಾರಕ ದಾಳಿ ನಡೆಸಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅತಿ ಹೆಚ್ಚು 4 ವಿಕೆಟ್‌ಗಳನ್ನು ಕಬಳಿಸಿದರು.ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ಈ ನಿರ್ಧಾರವನ್ನು ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಕಿವೀಸ್ ತಂಡದ ಆರಂಭವು ಅತ್ಯಂತ ಕಳಪೆಯಾಗಿತ್ತು. ವಿಲ್ ಯಂಗ್ 9 ರನ್ ಗಳಿಸಿ, 22ನೇ ಸ್ಕೋರಿಂಗ್‌ನಲ್ಲಿ ಮೊದಲ ವಿಕೆಟ್‌ ಆಗಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ನ್ಯೂಜಿಲೆಂಡ್‌ ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು ಹಾಗೂ ಯಾವುದೇ ದೊಡ್ಡ ಜೊತೆಯಾಟ ಆಡಲು ವಿಫಲವಾಯಿತು.ಡೆವೊನ್ ಕಾನ್ವೆ ಬದಲಿಗೆ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ತಂಡದ ಪರವಾಗಿ ಅತಿ ಹೆಚ್ಚು 38 ರನ್ ಗಳಿಸಿದರು. 43 ಎಸೆತಗಳನ್ನು ಎದುರಿಸಿದ ಸೀಫರ್ಟ್ 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಸಿಡಿಸಿದರು. ಡೇರಿಲ್ ಮಿಚೆಲ್ 41 ಎಸೆತಗಳಲ್ಲಿ 28 ರನ್ ಮತ್ತು ಗ್ಲೆನ್ ಫಿಲಿಪ್ಸ್ 51 ಎಸೆತಗಳಲ್ಲಿ 30 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಬೇರೆ ಯಾವ ಕಿವೀಸ್ ಬ್ಯಾಟ್ಸ್‌ಮನ್‌ಗಳೂ ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಡೇರಿಲ್ ಮಿಚೆಲ್ ಅವರನ್ನು ರೋಹಿತ್ ಶರ್ಮಾ ಅಮೋಘ ರೀತಿಯಲ್ಲಿ ರನ್ ಔಟ್ ಮಾಡಿದರು.ಒಂದು ಹಂತದಲ್ಲಿ 146 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್‌ ತಂಡಕ್ಕೆ ಬ್ಲೇರ್ ಟಿಡ್ನರ್ ಸಂಕಟಮೋಚಕರಾದರು. ಕೊನೆಯ ಕ್ರಮಾಂಕದಲ್ಲಿ ಕಣಕ್ಕಳಿದ ಈ ಆಟಗಾರ 23 ಎಸೆತಗಳಲ್ಲಿ 34 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡದ ಮೊತ್ತವನ್ನು 185ಕ್ಕೆ ತಲುಪಿಸಿದರು. ಕೊನೆಯ ವಿಕೆಟ್‌ಗೆ ನಡೆದ 39 ರನ್‌ಗಳ ಜೊತೆಯಾಟದಲ್ಲಿ ಟಿಡ್ನರ್‌ಗೆ ಜೊತೆಯಾದ ಡಫಿ ಅಜೇಯ 15 ರನ್‌ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕಿವೀಸ್ ತಂಡವು 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಸರ್ವಪತನ ಕಂಡಿತು.ಭಾರತದ ಪರವಾಗಿ ಅನ್ಶುಲ್ ಕಾಂಬೋಜ್ ಅತ್ಯಂತ ಮಿತವ್ಯಯದ ಬೌಲಿಂಗ್ ಪ್ರದರ್ಶನ ನೀಡಿದರು. ಕಾಂಬೋಜ್ 10 ಓವರ್‌ಗಳಲ್ಲಿ 2 ಮೇಡನ್ ಓವರ್‌ಗಳನ್ನು ಮಾಡಿ ಕೇವಲ 22 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಸ್ವಲ್ಪ ವೆಚ್ಚದಾಯಕವಾದರೂ 10 ಓವರ್‌ಗಳಲ್ಲಿ 70 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಹಾಗೆಯೇ ಗುರ್ನೂರ್ ಬ್ರಾರ್ 9.2 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.