ಬರ ಪರಿಸ್ಥಿತಿ : ಮನವಿಗೆ ಕೇಂದ್ರದಿಂದ ಕಳೆದ ಎರಡು ತಿಂಗಳಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ : ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಿದ್ದರೂ, ಕಳೆದ ಎರಡು ತಿಂಗಳಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯಕ್ಕೆ ಬರ ಪರಿಹಾರವಾಗಿ ಒಟ್ಟು ₹22 ಸಾವಿರ ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನೂ ಸಲ್ಲಿಸಿವೆ. ಆದರೂ ಪರಿಹಾರ ಬಿಡುಗಡೆಗೆ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ಇಂದು ಸದಾಶಿವನಗರದಲ್ಲಿರುವ ಗೃಹಕಚೇರಿ ಬಳಿ ವಿವಿಧ ವಿಚಾರಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ಇನ್ನೂ ಸ್ವಲ್ಪ ಕಾಲ ಕಾಯಲಿದ್ದು, ಆನಂತರ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಬರ ಯಾರನ್ನೂ ಕೇಳಿ ಬರುವುದಿಲ್ಲ. ರೈತರು ಸಂಕಷ್ಟದಲ್ಲಿರುವಾಗ ರಾಜಕೀಯ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಬ್ಬರ ಮೇಲೊಬ್ಬರು ಆರೋಪ ಮಾಡುವುದಕ್ಕಿಂತ ರೈತರ ನೆರವಿಗೆ ನಿಲ್ಲುವುದು ಮುಖ್ಯ. ಬರದ ವಿಚಾರದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ ಎಂಬುದನ್ನು ರೈತರು ಪ್ರಶ್ನಿಸುತ್ತಾರೆ. ರಾಜಕೀಯ ಮಾಡಲು ಬೇರೆ ವಿಚಾರಗಳಿವೆ. ರೈತರ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಮಾಡಬಾರದು.ಕೇಂದ್ರ ಗೃಹ ಸಚಿವರು, ಕೃಷಿ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವರನ್ನು ಭೇಟಿಯಾಗಲು ಸಮಯ ಕೋರಿ ಪತ್ರ ಬರೆಯುವುದು ಸಾಮಾನ್ಯ ಪ್ರಕ್ರಿಯೆ. ರಾಜ್ಯದ ಸಮಸ್ಯೆಗಳನ್ನು ನೇರವಾಗಿ ವಿವರಿಸಲು ಅವಕಾಶ ನೀಡಬೇಕು. ಜವಾಬ್ದಾರಿಯುತ ರಾಜ್ಯ ಸರ್ಕಾರವೊಂದು ಕೇಂದ್ರದ ಸಂಬಂಧಪಟ್ಟ ಸಚಿವಾಲಯಕ್ಕೆ ಪತ್ರ ಬರೆದಾಗ ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕಿದೆ ಎಂದರು.ಈ ಹಿಂದೆಯೂ ಕೇಂದ್ರದಿಂದ ಪರಿಹಾರ ದೊರೆಯದ ಸಂದರ್ಭದಲ್ಲಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸುಮಾರು ₹3,500 ಕೋಟಿ ಪರಿಹಾರ ದೊರೆತಿತ್ತು. ಈ ಬಾರಿಯೂ ಅಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭಾವಿಸಿಲ್ಲ. ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಪರಿಹಾರ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಿದೆ.ರಾಜ್ಯ ಸರ್ಕಾರವು ಅರ್ಹ ರೈತರಿಗೆ ತಲಾ ₹5 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಈಗಾಗಲೇ ವಿತರಣೆ ಆರಂಭಿಸಿದೆ. ಬಹುತೇಕ ಎಲ್ಲ ಜಿಲ್ಲೆಗಳಿಗೂ ಪರಿಹಾರ ತಲುಪಿಸುವ ಕಾರ್ಯ ನಡೆಯುತ್ತಿದೆ. ಅಧಿವೇಶನ ಆರಂಭವಾಗುವ ಮುನ್ನವೇ ರೈತರಿಗೆ ಘೋಷಿಸಿರುವ ಹಣ ತಲುಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ.ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿಗಳೇ ಮುಂದಾಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಪ್ರತಿಭಟನಾಕಾರರ ಪ್ರತಿನಿಧಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಖುದ್ದಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ. ನನ್ನನ್ನು ನಂಬಿ, ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೇ ಭರವಸೆ ನೀಡಿದಾಗ ಅವರ ಮಾತಿನ ಮೇಲೆ ವಿಶ್ವಾಸವಿಡಬೇಕಲ್ಲವೇ? ವಿಶ್ವಾಸವಿಲ್ಲದಿದ್ದರೆ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ? ಎಂದು ಪ್ರಶ್ನಿಸಿದರು.ನವೆಂಬರ್ 25ರ ಸಂಜೆ ಮುಖ್ಯಮಂತ್ರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಆನಂತರ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿಂದೆ ನೀಡಿರುವ ಭರವಸೆಗಳನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರ ಖಂಡಿತವಾಗಿಯೂ ಸಮಸ್ಯೆ ಬಗೆಹರಿಸಲಿದೆ. ಪ್ರತಿಭಟನಾಕಾರರು ಸ್ವಲ್ಪ ತಾಳ್ಮೆಯಿಂದ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಡಬೇಕು.ಪ್ರತಿಭಟನೆಗಳ ಸಂದರ್ಭದಲ್ಲಿ ಲಿಖಿತ ಭರವಸೆ ನೀಡುವಂತೆ ಆಗ್ರಹಿಸುವುದು ಸಾಮಾನ್ಯ. ಇಂತಹ ಬೇಡಿಕೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಆದರೆ, ಮುಖ್ಯವಾಗಿ ಅವರ ಸಮಸ್ಯೆ ಬಗೆಹರಿಯಬೇಕು. ಅವರ ಬೇಡಿಕೆ ಸರಿ ಅಥವಾ ತಪ್ಪು ಎಂದು ಚರ್ಚಿಸುವುದಕ್ಕಿಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದರು. ರವಿ ಹಂಜ್ ಸರ್ಕಾರಕ್ಕೆ ಸವಾಲು ಹಾಕಿರುವುದು ಹಾಗೂ ಪುಸ್ತಕ ಮುಟ್ಟುಗೋಲು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಪುಸ್ತಕದಲ್ಲಿ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಪುಸ್ತಕದಲ್ಲಿರುವ ಹೇಳಿಕೆಗಳನ್ನು ಆಧರಿಸಿ ಸರ್ಕಾರದ ವಿರುದ್ಧ ಸವಾಲು ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ರಾಜ್ಯದ ಹಲವು ಸಮುದಾಯಗಳು ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಚರ್ಚೆ ನಡೆದಿದೆ.ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಲಾಗಿದೆ. ಪುಸ್ತಕದಲ್ಲಿರುವ ಅಂಶಗಳನ್ನು ಪರಿಶೀಲಿಸಿಯೇ ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಈಗ ಅವರು ಸರ್ಕಾರಕ್ಕೆ ಸವಾಲು ಹಾಕುವುದಾದರೆ, ಈ ದೇಶದಲ್ಲಿ ಕಾನೂನು ಇದೆ ಎಂಬುದನ್ನು ನೆನಪಿಸಬೇಕಾಗುತ್ತದೆ. ಅವರು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವುದರಿಂದ ಇಲ್ಲಿನ ಕಾನೂನುಗಳನ್ನು ಮರೆತಿರಬಹುದು. ಈ ದೇಶದ ಕಾನೂನುಗಳನ್ನು ಮತ್ತೊಮ್ಮೆ ಅವರಿಗೆ ನೆನಪಿಸಬೇಕಿದೆ ಎಂದರು.
ಸಂಬಂಧಿತ ಸುದ್ದಿಗಳು

ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ : ಡಾ.ವೈ.ಡಿ.ರಾಜಣ್ಣ
ವಿನಯ್ ದೊಡ್ಡಕೊಪ್ಪಲುಕೆ.ಆರ್.ನಗರ : ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ ಎಂದು ಜಿಲ್ಲಾ ಕನ್ನ…
◷ 24/11/2026
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸಲು ವಿಶೇಷ ಕಾಳಜಿ ವಹಿಸಿ: ಭುವನೇಶ ಪಾಟೀಲ್
ಧಾರವಾಡ : ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಶಿಕ್ಷಣ ನೀಡುವುದಷ್ಟೇ ಶಿಕ್ಷಣ ಇಲಾಖೆಯ ಉದ್ದೇಶವಾಗಬಾರದು. ಅವರು…
◷ 24/11/2026
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನ ಸದ್ಬಳಕೆಗೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ: ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ
ಬಳ್ಳಾರಿ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ …
◷ 24/11/2026
ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ 1.17 ಕೋಟಿ ಕಾಣಿಕೆ ಸಂಗ್ರಹ
ಬಳ್ಳಾರಿ : ನಗರದ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಸೋಮವಾರ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು, ಒಟ್ಟು 1,17,87,9…
◷ 24/11/2026
