ಚಿತ್ರದುರ್ಗ:  ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ನಿಲ್ದಾಣ ಮಹೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ರೈಲ್ವೆ ಇಲಾಖೆಯಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ರೈಲ್ವೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಸಿ. ಎಂ. ರಾಜಶೇಖರಪ್ಪ, ನಿವೃತ್ತ ಡೆಪ್ಯೂಟಿ. ಎಸ್‌ಎ/ಸಿಎಒ  ಶ್ರೀ ಕಲ್ಲೈ ಅರುಸು, ಡೆಪ್ಯೂಟಿ. ಸಿಎಸ್‌ಟಿಇ    ಡೊಂಬಾರ್ ಬಿ. ಎಲ್., ನಿವೃತ್ತ ರೈಲು ವ್ಯವಸ್ಥಾಪಕರು    ತಿಪ್ಪಯ್ಯ, ನಿವೃತ್ತ ಸ್ಟೇಷನ್ ಸೂಪರಿಂಟೆಂಡೆಂಟ್ ಹಾಗೂ   ಪಕ್ಕೀರಪ್ಪ, ನಿವೃತ್ತ ಟ್ರ್ಯಾಕ್ ಮ್ಯಾನ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ  ಸಿ. ಎಂ. ರಾಜಶೇಖರಪ್ಪ ಮತ್ತು   ಕಲ್ಲೈ ಅರುಸು ಅವರು ರೈಲ್ವೆ ಇಲಾಖೆಯಲ್ಲಿ ತಾವು ಕರ್ತವ್ಯ ನಿರ್ವಹಿಸಿದ ಅವಧಿಯ ಅನುಭವಗಳು ಹಾಗೂ ಸ್ಮರಣೀಯ ಘಟನೆಗಳನ್ನು ಹಂಚಿಕೊಂಡರು. ತಮ್ಮ ವೃತ್ತಿಜೀವನದ ನೆನಪುಗಳನ್ನು ಮೆಲುಕು ಹಾಕಿದ ಅವರು, ರೈಲ್ವೆ ಕಾರ್ಯಾಚರಣೆಯಲ್ಲಿ ಸಮರ್ಪಣೆ, ಬದ್ಧತೆ ಮತ್ತು ತಂಡದ ಕೆಲಸದ ಮಹತ್ವವನ್ನು ವಿವರಿಸಿದರು. ರೈಲ್ವೆ ಸಿಬ್ಬಂದಿಯ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಲು ನಿಲ್ದಾಣ ಮಹೋತ್ಸವವು ಉತ್ತಮ ವೇದಿಕೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗದ ಶ್ರೀಬೃಹನ್ಮಠ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು, ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಶ್ರೀ ಬೃಹನ್ಮಠ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ರೈಲ್ವೆ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.