ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಾನವೀಯ ಸೇವೆಗೆ ಮತ್ತೂಮ್ಮೆ ಸಾಕ್ಷಿಯಾಗಿದೆ.ನಗರದ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ದಾನಿಯ ಹೃದಯವನ್ನು ತುರ್ತಾಗಿ ಸುರಕ್ಷಿತವಾಗಿ ಮೆಟ್ರೋ ಮೂಲಕ ಸಾಗಿಸಲಾಗಿದೆ. ಸ್ಪರ್ಶ್ ಆಸ್ಪತ್ರೆಯ ಐವರು ವೈದ್ಯಕೀಯ ಸಿಬ್ಬಂದಿ ಹೃದಯ ಸಾಗಣೆ ಪೆಟ್ಟಿಗೆಯೊಂದಿಗೆ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣ ಪ್ರವೇಶಿಸಿದರು. ಅಗತ್ಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಪೂರ್ಣಗೊಳಿಸಿದ ಬಳಿಕ 12.23ಕ್ಕೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಹೃದಯದ ಸುರಕ್ಷತೆಗೆ ಆದ್ಯತೆ ನೀಡಿದ ಬಿಎಂಆರ್ ಸಿಎಲ್ ಭದ್ರತಾ ಸಿಬ್ಬಂದಿಯೂ ವೈದ್ಯಕೀಯ ತಂಡದೊಂದಿಗೆ ಪ್ರಯಾಣಿಸಿ ಅಗತ್ಯ ಸಹಕಾರ ನೀಡಿದರು.ಮಧ್ಯಾಹ್ನ 1.24ಕ್ಕೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ತಲುಪಿದ ವೈದ್ಯಕೀಯ ತಂಡವು ಹೃದಯವನ್ನು ಬಳಿಕ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ಗೆ ಕೊಂಡೊಯ್ದಿತು. ಮಾನವ ಅಂಗಾಂಗಗಳ ಸಾಗಣೆಗೆ ಬಿಎಂಆರ್ ಸಿಎಲ್‌ ನೆರವು ನೀಡಿದ 8ನೇ ಪ್ರಕರಣ ಇದಾಗಿದ್ದು, ಹೃದಯ ಸಾಗಣೆಗೆ ಸಂಬಂಧಿಸಿದಂತೆ 5ನೇ ಪ್ರಕರಣ ವಾಗಿದೆ. ಸಮಯದ ಮಹತ್ವ ಹೊಂದಿರುವ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ನೆರವು ನೀಡಲು ಬಿಎಂಆರ್‌ಸಿಎಲ್ ಬದ್ಧವಾಗಿದೆ.ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಸಮಯ ಅತ್ಯಂತ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಮೆಟ್ರೋ ನಿಗಮದ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.