ಮೈಸೂರು: ತಮ್ಮ ಸಾಹಿತ್ಯ ಹಾಗೂ ಭಕ್ತಿಗೀತೆಗಳ ಮೂಲಕ ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರೆಂದರೆ ಸಂತಶ್ರೇಷ್ಠ ಕನಕದಾಸರು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಇಂದು ಕರ್ನಾಟಕ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿ (ರಿ)ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರ 539ನೇ ಜಯಂತಿ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕನಕದಾಸರು 15-16ನೇ ಶತಮಾನದಲ್ಲಿ ಬದುಕಿದ್ದರೂ, ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಬರೀ ಭಕ್ತಿಗೀತೆಗಳಿಗಷ್ಟೇ ಸೀಮಿತವಾಗದೆ, ಕುಲ ಕುಲವೆಂದು ಹೊಡೆದಾಡುವಿರಿ ಎಂಬ ಕೃತಿಯ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಜಾತಿ ವ್ಯವಸ್ಥೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ ಅತ್ಯಗತ್ಯ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಮಾನ ಅವಕಾಶಗಳು ದೊರೆತಿವೆ. ಶೋಷಿತರು, ಹಿಂದುಳಿದವರು ಮತ್ತು ದಲಿತರು ಉನ್ನತ ಶಿಕ್ಷಣ ಪಡೆದು ಆತ್ಮವಿಶ್ವಾಸದಿಂದ ಮುಂದೆ ಬಂದಾಗ ಮಾತ್ರ ಸಮಾಜ ಸುಸ್ಥಿರವಾಗಲು ಸಾಧ್ಯ ಎಂದು ಹೇಳಿದರು.ತಳಮಟ್ಟದಲ್ಲಿರುವ ಬಡವರು ಮತ್ತು ದುರ್ಬಲ ವರ್ಗದವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಕನಕದಾಸರ ಸಮಗ್ರ ಸಾಹಿತ್ಯದ ಅನುವಾದ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದ್ದು, ಇದರಿಂದ ಬಡವರ ಬದುಕಿನಲ್ಲಿ ನೆಮ್ಮದಿ ಮೂಡಿದೆ ಮತ್ತು ರಾಜ್ಯದ ತಲಾ ಆದಾಯವೂ ಹೆಚ್ಚಿದೆ. ಕನಕದಾಸರ ಚಿಂತನೆಗಳನ್ನು ಕೇವಲ ಕೇಳುವುದಷ್ಟೇ ಅಲ್ಲದೆ, ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಸಮಾಜದ ಬೆಳವಣಿಗೆ ಸಾಧ್ಯ ಎಂದರು.ಕನಕದಾಸರ ಜಯಂತೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ  ಎಂ. ಕೆ. ಸೋಮಶೇಖರ್   ಮಾತನಾಡಿ  ಕನಕದಾಸರು ದೇವರ ಹೆಸರಿನಲ್ಲಿ ಹಲವು ಕೀರ್ತನೆಗಳು, ಸಾಹಿತ್ಯ ಮತ್ತು ಕಾವ್ಯಗಳ ಮೂಲಕ ಸಮಾಜದ ಅಂಕುಡೊಂಕುಗಳು, ಅಸಮಾನತೆ ಹಾಗೂ ಮೌಢ್ಯ ಆಚರಣೆಗಳನ್ನು ಖಂಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಎಂದರು.ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಅವರ ಮಾತುಗಳು ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶ ಸಾರುತ್ತವೆ. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಬಸವಣ್ಣನವರು, ಕುವೆಂಪು ಅವರು, ಡಾ. ಬಿ. ಆರ್. ಅಂಬೇಡ್ಕರ್ ಅವರು ಹಾಗೂ ಬುದ್ಧನ ವಿಚಾರಧಾರೆಗಳನ್ನೂ ಇದೇ ವೇಳೆ ಪ್ರಸ್ತಾಪಿಸಿ, ಬುದ್ಧನ ನೈತಿಕತೆ ಮತ್ತು ಸಮಾನತೆಯ ಚಿಂತನೆಗಳು ದೇಶದ ಬೆಳವಣಿಗೆಗೆ ದಾರಿಯಾಗಬೇಕಿದ್ದವು. ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವಂತಾಗಬೇಕು ಎಂದು ತಿಳಿಸಿದರು.ಹರಿಕಥಾ ವಿದ್ವಾಂಸರು ಹಾಗೂ ನಿವೃತ್ತ ಶಿಕ್ಷಣಾಧಿಕಾರಿಗಳಾದ  ಎಂ.ಬಿ. ನಿಂಗಪ್ಪ  ಅವರು ಉಪನ್ಯಾಸ ನೀಡಿ ಮಾತನಾಡಿ  ಕನಕದಾಸರು ಯಾವುದೇ ಜಾತಿ ಅಥವಾ ಮತಕ್ಕೆ ಸೀಮಿತವಾಗದೆ ಸಕಲ ತತ್ವಗಳನ್ನು ಮೀರಿ ಬೆಳೆದ ವಿಶ್ವಮಾನವ ಹಾಗೂ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು. ಹರಿದಾಸ ಸಾಹಿತ್ಯದ ಸುವರ್ಣ ಯುಗದ ಪ್ರವರ್ತಕರಲ್ಲಿ ಪ್ರಮುಖರಾದವರು ಕನಕದಾಸರು.ಬಾಡ ಗ್ರಾಮದಲ್ಲಿ ಜನಿಸಿದ ಕನಕದಾಸರಿಗೆ, ತಂದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಫಲವಾಗಿ ಜನಿಸಿದ ಕಾರಣ ತಿಮ್ಮಪ್ಪ ಎಂದು ನಾಮಕರಣ ಮಾಡಲಾಯಿತು. ಬಾಲ್ಯದಲ್ಲಿಯೇ ಕಲಿಕೆ, ಕತ್ತಿವರಸೆ, ಕುದುರೆ ಸವಾರಿ ಸೇರಿದಂತೆ ವಿವಿಧ ವಿದ್ಯೆಗಳನ್ನು ಕರಗತ ಮಾಡಿಕೊಂಡರು. ರಾಮಾನುಜರ ಶಿಷ್ಯರಾದ ತಾತಾಚಾರ್ಯರ ಮಾರ್ಗದರ್ಶನದಲ್ಲಿ ಸಂಸ್ಕೃತ, ಮಹಾಭಾರತ, ರಾಮಾಯಣ, ಭಾಗವತ ಹಾಗೂ ಧರ್ಮಗ್ರಂಥಗಳನ್ನು ಕರತಲಾಮಲಕವಾಗಿ ಅಭ್ಯಾಸ ಮಾಡಿದರು ಎಂದರು.ತಂದೆಯ ನಂತರ ದಣ್ಣಾಯಕನ ಪಟ್ಟಕ್ಕೇರಿದ ಅವರು, ಹಲವು ಹಳ್ಳಿಗಳ ರಕ್ಷಣೆ ಮತ್ತು ಆಡಳಿತ ನಿರ್ವಹಣೆಯಲ್ಲಿ ತೊಡಗಿಸಿಕೊಂಡು ವಿಜಯನಗರದ ಅರಸರ ವಿಶ್ವಾಸಕ್ಕೆ ಪಾತ್ರರಾದರು. ಗುರುಸೇವೆ, ಪರೀಕ್ಷೆ ಮತ್ತು ಹರಿದಾಸ ಪಥ ಕನಕದಾಸರ ಆಧ್ಯಾತ್ಮಿಕ ಪಯಣದ ಘಟ್ಟಗಳನ್ನು ಸ್ಮರಿಸಿದರು. ವಿಜಯನಗರದಲ್ಲಿ ಶ್ರೀ ವ್ಯಾಸರಾಯರ  ಪರಿಚಯವಾಗಿ, ಕನಕದಾಸರ ಅಪಾರ ಪ್ರತಿಭೆಯನ್ನು ಗುರುಗಳು ಮೆಚ್ಚಿಕೊಂಡರು. ಶಿಷ್ಯರ ನಡುವಿನ ಅಸೂಯೆ ನಿವಾರಿಸಲು ವ್ಯಾಸತೀರ್ಥರು ನೀಡಿದ ಬಾಳೆಹಣ್ಣನ್ನು ದೇವರಿಲ್ಲದ ಜಾಗದಲ್ಲಿ ತಿಂದು ಬನ್ನಿ ಎಂಬ ಪರೀಕ್ಷೆಯಲ್ಲಿ, ಸರ್ವವ್ಯಾಪಿ ಭಗವಂತ ಎಲ್ಲೆಡೆ ಇರುವುದನ್ನು ಮನಗಂಡ ಕನಕದಾಸರು ತಿನ್ನದೆ ಹಿಂದಿರುಗಿದರು ಎಂದು ಹೇಳಿದರು.ಯುದ್ಧದಲ್ಲಿ ಕಂಡ ಸಾವು-ನೋವು, ಕೌಟುಂಬಿಕ ನಷ್ಟಗಳು ಹಾಗೂ ಭಗವಂತನ ದರ್ಶನದ ಪ್ರೇರಣೆಯಿಂದ ದಣ್ಣಾಯಕ ಪದವಿ ಮತ್ತು ಐಹಿಕ ಸಂಪತ್ತನ್ನು ತ್ಯಜಿಸಿ, ಕಾಗಿನೆಲೆಯ ಆದಿಕೇಶವನ ಅಂಕಿತದಲ್ಲಿ ಹರಿದಾಸ ದೀಕ್ಷೆ ಸ್ವೀಕರಿಸಿದರು.ಸಾಹಿತ್ಯ ಕೊಡುಗೆ ಮತ್ತು ಸಾಮಾಜಿಕ ಪ್ರಜ್ಞೆ, ಹರಿದಾಸ ಪರಂಪರೆಯಲ್ಲಿ ಸುಮಾರು 350ಕ್ಕೂ ಹೆಚ್ಚು ದಾಸರಲ್ಲಿ ದಲಿತ/ಶೂದ್ರ ಹಿನ್ನೆಲೆಯಿಂದ ಬಂದು ಅಧ್ಯಾತ್ಮದ ಉತ್ತುಂಗಕ್ಕೇರಿದ ವಿಶಿಷ್ಟ ವ್ಯಕ್ತಿತ್ವ ಕನಕದಾಸರದ್ದು ಎಂದು  ಶ್ಲಾಘಿಸಿದರು.ಕನಕದಾಸರು ರಚಿಸಿದ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ ಸೇರಿದಂತೆ ವಿವಿಧ ಕಾವ್ಯಗಳು ಹಾಗೂ ಕೀರ್ತನೆಗಳ ಮಹತ್ವವನ್ನು ಅವರು ವಿವರಿಸಿದರು.  ಸಮಾಜದ ಮೇಲ್ವರ್ಗ ಮತ್ತು ಕೆಳವರ್ಗದ ಆಹಾರ ಧಾನ್ಯಗಳ ಸಂವಾದದ ಮೂಲಕ ಸಾಮಾಜಿಕ ಸಮಾನತೆ ಹಾಗೂ ವಾಸ್ತವದ ಸತ್ಯವನ್ನು ರಾಮಧಾನ್ಯ ಚರಿತ್ರೆ ಸಾರುತ್ತದೆ. ಕುಲ-ಕುಲವೆಂದು ಹೊಡೆದಾಡುವ ಸಮಾಜಕ್ಕೆ ಸತ್ಯ, ಭಕ್ತಿ ಮತ್ತು ಮಾನವೀಯತೆಯೇ ನಿಜವಾದ ಕುಲ ಎಂಬ ಸಂದೇಶವನ್ನು ಕನಕದಾಸರು ನೀಡಿದರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ಕಾಗಿನೆಲೆ ಕನಕ ಗುರುಪೀಠದ ಪರಮ ಪೂಜ್ಯ ಶ್ರೀ  ಡಾ. ಶಿವಾನಂದಪುರಿ ಸ್ವಾಮೀಜಿ, ಚಾಮರಾಜ ಕ್ಷೇತ್ರದ ವಿಧಾನಸಭೆ ಶಾಸಕ  ಕೆ. ಹರೀಶ್ ಗೌಡ,ವಿಧಾನ ಪರಿಷತ್ ಶಾಸಕ  ಡಾ. ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ  ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತ  ಎನ್. ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ  ಆರ್. ಐಶ್ವರ್ಯ,ಕನಕದಾಸರ ಜಯಂತೋತ್ಸವ ಸಮಿತಿಯ ಎಂ. ಶಿವಣ್ಣ, ಸುಬ್ರಮಣ್ಯ, ಸಿದ್ದಲಿಂಗೇಗೌಡ,ಎಂ ಮಹದೇವೇಗೌಡ, ಟಿ. ಬಿ ಚಿಕ್ಕಣ್ಣ, ಗೋಪಿ, ಬಸವರಾಜು, ರವಿ ಮತ್ತಿತರರು ಉಪಸ್ಥಿತರಿದ್ದರು.