ಮೈಸೂರು : ರಾಷ್ಟ್ರೀಯ ಬೌದ್ಧಿಕ ವಿಕಲಚೇತನರ (ದಿವ್ಯಾಂಗಜನ) ಸಬಲೀಕರಣ ಸಂಸ್ಥೆಯ (NIEPID) ಮಾರ್ಗದರ್ಶನದಲ್ಲಿ, 'ಪರಿವಾರ್ ನ್ಯಾಷನಲ್ ಕಾನ್ಫೆಡರೇಶನ್ ಆಫ್ ಪೇರೆಂಟ್ಸ್ ಆರ್ಗನೈಸೇಶನ್ಸ್' (PARIVAAR–NCPO) ವತಿಯಿಂದ ನವೆಂಬರ್ 28 ಮತ್ತು 29ರಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (AIISH) 32ನೇ ರಾಷ್ಟ್ರೀಯ ಪೋಷಕರ ಸಮ್ಮೇಳನವನ್ನು ಆಯೋಜಿಸಲಾಗಿದೆ.ಸಮ್ಮೇಳನದ ಕುರಿತು ಮಾಹಿತಿ ಹಂಚಿಕೊಂಡ ಪರಿವಾರ್–ಎನ್ಸಿಪಿಒ ರಾಷ್ಟ್ರೀಯ ಅಧ್ಯಕ್ಷ ಡಾ. ಪಂಕಜ್ ಮಾರು ಅವರು, "‘ಆರೈಕೆಯಿಂದ ಸಬಲೀಕರಣದತ್ತ: ಬಲಿಷ್ಠ ಕುಟುಂಬಗಳು ಮತ್ತು ಸಾಮೂಹಿಕ ಕ್ರಿಯೆಯ ಮೂಲಕ ಸಮಾವೇಶಿ ಸಮುದಾಯಗಳನ್ನು ನಿರ್ಮಿಸುವುದು’ ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಎರಡು ದಿನಗಳ ಸಮ್ಮೇಳನವು ಸ್ವ-ಪ್ರತಿಪಾದಕರು (ಸೆಲ್ಫ್-ಅಡ್ವೊಕೇಟ್ಸ್), ಕುಟುಂಬಗಳು, ಪೋಷಕರ ಸಂಘಟನೆಗಳು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಗೆ ತರಲಿದೆ. ಬೌದ್ಧಿಕ ಮತ್ತು ಬೆಳವಣಿಗೆಯ ವಿಕಲಚೇತನರ ಹಕ್ಕುಗಳು, ಸ್ವ-ಪ್ರತಿಪಾದನೆ ಮತ್ತು ಸಹಭಾಗಿತ್ವವನ್ನು ಮುನ್ನಡೆಸಲು ಕುಟುಂಬಗಳು, ಸಂಸ್ಥೆಗಳು ಮತ್ತು ಪೋಷಕರ ನೇತೃತ್ವದ ಸಂಘಟನೆಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಕುರಿತು ಸಮ್ಮೇಳನವು ಗಮನಹರಿಸಲಿದೆ" ಎಂದು ತಿಳಿಸಿದರು.ಹೈದರಾಬಾದ್‌ ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ (MANUU) ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೈಸೂರಿನ ಆಯಿಷ್ (AIISH), ಜೆಎಸ್ಎಸ್ ವಿಕಲಚೇತನರ ಪಾಲಿಟೆಕ್ನಿಕ್, ಮೈಸೂರು ಜಿಲ್ಲಾ ಪೋಷಕರ ಸಂಘ ಮತ್ತು ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಮಿಡ್ಟೌನ್ ಈ ಕಾರ್ಯಕ್ರಮದ ಸಹ-ಆತಿಥೇಯರಾಗಿದ್ದಾರೆ.ನವೆಂಬರ್ 28ರ ಶನಿವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಡಾ. ಮಾರು ತಿಳಿಸಿದರು. ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ವಿ. ವಿದ್ಯಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಲಿದ್ದಾರೆ. ಡಾ. ಕಿರಣ್ ಬೇಡಿ ಅವರು ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಎನ್ಐಇಪಿಐಡಿ ನಿರ್ದೇಶಕ ಮೇಜರ್ (ಡಾ.) ಬಿ.ವಿ. ರಾಮ್ಕುಮಾರ್ ಮತ್ತು ಆಯಿಷ್ ನಿರ್ದೇಶಕಿ ಎಂ. ಪುಷ್ಪಾವತಿ ಅವರು ಸಹ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 450ಕ್ಕೂ ಹೆಚ್ಚು ಪೋಷಕರು, ಪರಿವಾರ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ಸ್ವ-ಪ್ರತಿಪಾದಕರು, ಪುನರ್ವಸತಿ ವೃತ್ತಿಪರರು ಹಾಗೂ ಇತರ ಗಣ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಕಲಚೇತನರ ಪ್ರತಿಭೆಯನ್ನು ಅನಾವರಣಗೊಳಿಸಲು ನವೆಂಬರ್ 28ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಮನು (MANUU) ಸ್ಕೂಲ್ ಆಫ್ ಟೆಕ್ನಾಲಜಿ ಡೀನ್ ಪ್ರೊ. ಅಬ್ದುಲ್ ವಾಹಿದ್ ಅವರ ಭಾಷಣದ ನಂತರ, ಬೌದ್ಧಿಕ ಮತ್ತು ಬೆಳವಣಿಗೆಯ ವಿಕಲಚೇತನರ ಕಲಿಕೆಗೆ ನೆರವಾಗಲು ವಿನ್ಯಾಸಗೊಳಿಸಲಾದ 'ದಿವ್ಯಾಂಗ್ ಸಾರಥಿ' (Divyang SARTHI) ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪರಿವಾರ್ ವತಿಯಿಂದ 2026ನೇ ಸಾಲಿನ 'ರೀಟಾ ಪ್ರೇಮಲತಾ ಪೇಶ್ವರಿಯಾ ಮೆನನ್ ಪ್ರಶಸ್ತಿ' ಹಾಗೂ 'ಬಿಎಂಜಿ (BMG) ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು ಮತ್ತು 2025–26ನೇ ಸಾಲಿನ ವಾರ್ಷಿಕ ವರದಿ, ಜಾಗೃತಿ ಸಾಮಗ್ರಿಗಳು ಹಾಗೂ ಕರ್ನಲ್ ವಿ.ಕೆ. ಗೌತಮ್ ಅವರ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.