ಬೆಂಗಳೂರು :  ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಅಳಿಸುವ ಕೆಲಸ ಮಾಡುತ್ತಿದೆ. ಯಾವುದೇ ವಿಚಾರಣೆ (ಎನ್‌ಕ್ವೈರಿ) ಅಥವಾ ತನಿಖೆ ನಡೆಯದೆಯೇ ಕ್ಲೀನ್ ಚಿಟ್ ಎಲ್ಲಿಂದ ಬಂತು? ಇದು ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಹಿಂದೆ ಎಸ್‌ಐಟಿ (SIT) ರಚನೆ ಮಾಡಿದ್ದೇ ಕ್ಲೀನ್ ಚಿಟ್ ಕೊಡಿಸಿಕೊಳ್ಳಲು ಎಂಬುದು ಈಗ ಸಾಬೀತಾಗಿದೆ. ಆದ್ದರಿಂದ ಈ ಪ್ರಕರಣವನ್ನು ತಕ್ಷಣ ಸಿಬಿಐಗೆ (CBI) ವಹಿಸಿ; ಸಿಬಿಐ ತನಿಖೆ ನಡೆಸಿ ನಿಮಗೆ ಕ್ಲೀನ್ ಚಿಟ್ ಕೊಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಳ್ಳುತ್ತದೆ. ಉಳಿದಂತೆ ಎಲ್ಲೆಡೆ ಕಾಂಗ್ರೆಸ್ ನಾಯಕರ ಫೋಟೋಗಳೇ ಇರುತ್ತವೆ. ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಾಂಗ್ರೆಸ್‌ನವರು ಭಾರತೀಯ ಜನತಾ ಪಕ್ಷದಿಂದ ಕಲಿಯಬೇಕು. ಸಂವಿಧಾನವನ್ನು ಎರಡು ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿಟ್ಟು, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಹಾಗೂ ಅನ್ಯಾಯ ಮಾಡಿ, ಸಂವಿಧಾನಕ್ಕೂ ದ್ರೋಹ ಬಗೆದವರೇ ಇಂದು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. 75 ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನ ಯಾಕೆ ಜಾರಿಯಲ್ಲಿರಲಿಲ್ಲ? ಆರ್ಟಿಕಲ್ 370 ಇಟ್ಟುಕೊಂಡು ಅಲ್ಲಿನ ಜನರಿಗೆ ಅನ್ಯಾಯ ಮಾಡುತ್ತಿದ್ದಿರಿ. ಇಂದು ಅಲ್ಲಿ ಯಾವುದೇ ಕಲ್ಲು ತೂರಾಟವಿಲ್ಲ, ಜಗಳವಿಲ್ಲ. ಜನರು ಸಂತುಷ್ಟರಾಗಿದ್ದು ದೇಶದ ಮುಖ್ಯವಾಹಿನಿಯೊಂದಿಗೆ ಬೆರೆತಿದ್ದಾರೆ. ಈ ಕೆಲಸ ಮಾಡಲು ನಿಮಗೆ ಏನಾಗಿತ್ತು? ಜನರಿಗೆ ಉತ್ತರ ಕೊಡಲಾಗದ ಸ್ಥಿತಿಗೆ ತಲುಪಿ ಈಗ ಸಂವಿಧಾನದ ಪುಸ್ತಕ ಹಿಡಿದು ತಿರುಗಾಡುತ್ತಿದ್ದೀರಿ ಎಂದರು.ಸಂವಿಧಾನಕ್ಕೆ ದ್ರೋಹ ಬಗೆದವರೇ ಇಂದು ಸಂವಿಧಾನ ತೊಂದರೆಯಲ್ಲಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಇಂದು ತೊಂದರೆಯಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್ ಪಕ್ಷ. ಕಾಂಗ್ರೆಸ್‌ಗೆ ತೊಂದರೆ ಬಂದರೆ ಅದನ್ನು ಸಂವಿಧಾನಕ್ಕೆ ಬಂದ ತೊಂದರೆ ಎಂದು ಬಿಂಬಿಸಬೇಡಿ. ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ—ಈ ದೇಶ ನೆಹರು-ಗಾಂಧಿ ದೇಶವಲ್ಲ, ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ. ಪ್ರಧಾನಿ   ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ದೇಶ ಸುಭದ್ರವಾಗಿದೆ, ಸಂವಿಧಾನ ಸುಭದ್ರವಾಗಿದೆ ಹಾಗೂ ಆಡಳಿತವೂ ಸುಗಮವಾಗಿ ನಡೆಯುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಇಂದು ನಿಜವಾದ ಗೌರವ ದೊರೆತಿದೆ ಎಂದರು. ರಾಜ್ಯದ ಆರೋಗ್ಯ ಸಚಿವರ ಆರೋಗ್ಯವೇ ಕೆಟ್ಟಿರುವಂತಿದೆ. ಅವರನ್ನು ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಾದ ಪರಿಸ್ಥಿತಿ ಇದೆ. ಇಂದು ನಾಡಿನ ಜನರ ಆರೋಗ್ಯ ಸರಿಯಾಗಿದೆ ಎಂದರೆ, ಅದಕ್ಕೆ ಕಾರಣ ತಮ್ಮ ಮನೆ-ಮಠ, ಮಕ್ಕಳನ್ನು ಬದಿಗಿಟ್ಟು ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರೆಲ್ಲರೂ ಸೇರಿ ಆರೋಗ್ಯ ಸಚಿವರ ಆರೋಗ್ಯವನ್ನು ಸರಿಪಡಿಸಲು ಒಂದು ಅವಕಾಶ ಕೊಡಬೇಕಾಗಿದೆ ಎಂದರು.ತಮ್ಮ ಹಕ್ಕು ಮತ್ತು ಬೇಡಿಕೆಗಳನ್ನು ಮುಂದಿಡುವುದನ್ನೇ 'ಬೆದರಿಕೆ' ಎಂದು ಈ ಸರ್ಕಾರ ತಿಳಿದುಕೊಂಡಿದ್ದರೆ, ಸರ್ಕಾರವೇ ಯಾವ ರೀತಿ ಬೆದರಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಚುನಾವಣೆ ವೇಳೆ ಗ್ಯಾರಂಟಿಗಳ ವಾಗ್ದಾನ ಮಾಡಿದವರು ಯಾರು? ಪ್ರಿಯಾಂಕಾ ವಾದ್ರಾ ಅವರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ, ಅವರನ್ನು ಕರೆಸಿ. ಅವರ ಕೈಯಲ್ಲಿ ಭರವಸೆ ಕೊಡಿಸಿದವರೆಲ್ಲ ಈಗ ಹೊರಗೆ ಬನ್ನಿ. ನೀವೇ ಕೊಟ್ಟ ಗ್ಯಾರಂಟಿಗಳನ್ನು ನೀವೇ ನುಂಗಿಬಿಟ್ಟಿರಾ? ಹತ್ತು ದಿನಗಳಿಂದ ಆ ತಾಯಂದಿರು ಚಳಿ, ಗಾಳಿ, ಮಳೆ ಲೆಕ್ಕಿಸದೆ ಬೀದಿಯಲ್ಲಿ ಕುಳಿತು ಹೋರಾಡುತ್ತಿದ್ದಾರೆ ಎಂದರೆ ಅವರಿಗೆ ಎಷ್ಟು ತೊಂದರೆಯಾಗಿರಬೇಕು? ಅವರ ಸಮಸ್ಯೆಗೆ ಪರಿಹಾರ ನೀಡುವುದು ಬಿಟ್ಟು, ಮತ್ತೊಬ್ಬ ಸಚಿವರು 'ಕೇಳಿದ ತಕ್ಷಣ ಹಾರ ಹಾಕಲು ಆಗುವುದಿಲ್ಲ' ಎಂದು ವ್ಯಂಗ್ಯವಾಡುತ್ತಾರೆ. ನೀವೇನು ರಾಜರಾ? ಈ ದೇಶದಲ್ಲಿರುವುದು ರಾಜಪ್ರಭುತ್ವವಲ್ಲ, ಪ್ರಜಾಪ್ರಭುತ್ವ! ಆಶಾ ಕಾರ್ಯಕರ್ತೆಯರ ಬಗ್ಗೆ ಈ ರೀತಿ ವ್ಯಂಗ್ಯವಾಡುವುದು ಮತ್ತು ಧಮಕಿ ಹಾಕುವುದನ್ನು ತಕ್ಷಣ ನಿಲ್ಲಿಸಿ—ಇಲ್ಲವಾದರೆ ಜನರು ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಿಸುವುದು ಗ್ಯಾರಂಟಿ ಎಂದರು.