ನವದೆಹಲಿ : ರಾಷ್ಟ್ರ ರಾಜಧಾನಿಯ ಸ್ವಚ್ಛತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ 10 ಸ್ವಯಂಚಾಲಿತ ರಸ್ತೆ ಗುಡಿಸುವ ಯಂತ್ರಗಳನ್ನು (Mechanical Road Sweeping Machines) ದೆಹಲಿ ಮಹಾನಗರ ಪಾಲಿಕೆಯ (MCD) ಪಡೆಗೆ ಸೇರ್ಪಡೆಗೊಳಿಸಿದ್ದಾರೆ. ಸಿವಿಕ್ ಸೆಂಟರ್‌ನಲ್ಲಿರುವ ಎಂಸಿಡಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಗುಪ್ತಾ ಅವರು ಈ ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೊಸ ಯಂತ್ರಗಳು ದೆಹಲಿಯ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಬಲ ನೀಡಲಿವೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಪಡೆಗೆ ಇನ್ನಷ್ಟು ಯಂತ್ರಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.ಇದೇ ವೇಳೆ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ರೇಖಾ ಗುಪ್ತಾ, "ಮಾಲಿನ್ಯ ನಿಯಂತ್ರಣದ ವಿರುದ್ಧ ನಮ್ಮ ಕ್ರಮ ನಿರಂತರವಾಗಿ ಸಾಗುತ್ತಿದೆ. ರಸ್ತೆಗಳಿಂದ ಏಳುವ ಧೂಳನ್ನು ತಡೆಗಟ್ಟಲು ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇಂದು 10 ಹೊಸ ಮೆಕ್ಯಾನಿಕಲ್ ರೋಡ್ ಸ್ವೀಪಿಂಗ್ ಯಂತ್ರಗಳು ಹಾಗೂ 9 ಬೆಂಬಲಿತ ವಾಹನಗಳನ್ನು (Support Vehicles) ದೆಹಲಿ ಜನತೆಯ ಸೇವೆಗೆ ಸಮರ್ಪಿಸಲಾಗಿದೆ. ಮಾಲಿನ್ಯದ ಮೂಲ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ದೆಹಲಿಯ ನಿವಾಸಿಗಳಿಗೆ ಶುದ್ಧ ಗಾಳಿ ಮತ್ತು ಆರೋಗ್ಯಕರ ವಾತಾವರಣ ಒದಗಿಸಲು ಪ್ರತಿಯೊಂದು ಹಂತದಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.ಈ ಸಂದರ್ಭದಲ್ಲಿ ದೆಹಲಿ ಮೇಯರ್ ಪ್ರವೇಶ್ ವಾಹಿ ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.