ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮೈಸೂರಿನಲ್ಲಿ ಬೆಂಬಲ : ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ

ಮೈಸೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ, ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿದರು.ಆಶಾ ಕಾರ್ಯಕರ್ತೆಯರು ಕೋವಿಡ್ ಸಾಂಕ್ರಾಮಿಕ ಸಮಯದಿಂದ ಹಿಡಿದು ಇಂದಿನವರೆಗೂ ಹಳ್ಳಿ-ಹಳ್ಳಿಗೆ ಹೋಗಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಲಸಿಕೆ, ಆರೋಗ್ಯ ತಪಾಸಣೆ, ಜನಜಾಗೃತಿ ಹೀಗೆ ಪ್ರತಿಯೊಂದು ಕೆಲಸದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡುತ್ತಿರುವ ಅವರಿಗೆ ಇಂದಿಗೂ ಸರಿಯಾದ ಗೌರವಧನ ಹಾಗೂ ಸೌಲಭ್ಯಗಳು ಸಿಗುತ್ತಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಕಾಲದಲ್ಲಿ ಕಡಿಮೆ ಗೌರವಧನದಲ್ಲಿ ಕುಟುಂಬ ನಡೆಸುವುದು ಅಸಾಧ್ಯವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮಾತನಾಡಿ, ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯದ ನಿಜವಾದ ಕಾವಲುಗಾರರು. ಅವರು ಇಲ್ಲದಿದ್ದರೆ ಗ್ರಾಮೀಣ ಆರೋಗ್ಯ ವ್ಯವಸ್ಥೆಯೇ ನಿಂತು ಹೋಗುತ್ತದೆ. ಸರ್ಕಾರ ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದೆ. ಕೂಡಲೇ ಅವರಿಗೆ 15,000 ರೂ. ಗೌರವಧನ ನಿಗದಿ ಮಾಡಬೇಕು. ಅವರಿಗೆ ನಿವೃತ್ತಿ ಸೌಲಭ್ಯ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಛೀಮಾರಿ ಹಾಕಿದ ಎಸ್. ಬಾಲಕೃಷ್ಣ ಅವರು, ಚುನಾವಣೆ ಸಮಯದಲ್ಲಿ ಬಡವರ ಪರವಾಗಿ ಮಾತನಾಡುವ ಜನಪ್ರತಿನಿಧಿಗಳು ಈಗ ಆಶಾ ಅಕ್ಕಂದಿರ ಕಷ್ಟ ಕೇಳುತ್ತಿಲ್ಲ. ವಿಧಾನಸೌಧದಲ್ಲಿ ಕುಳಿತು ದೊಡ್ಡ ದೊಡ್ಡ ಮಾತನಾಡುವ ಬದಲು, ಒಮ್ಮೆ ಹಳ್ಳಿಗೆ ಬಂದು ಆಶಾ ಕಾರ್ಯಕರ್ತೆಯರ ಕಷ್ಟ ನೋಡಿ. ಅವರ ಬೆವರಿನ ದುಡಿಮೆಗೆ ಬೆಲೆ ಕೊಡಿ. ಇಲ್ಲದಿದ್ದರೆ ಜನರೇ ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದರು.ಜನಪ್ರತಿನಿಧಿಗಳಿಗೂ ತೀವ್ರ ತರಾಟೆ ತೆಗೆದುಕೊಂಡ ಅವರು, ಮೈಸೂರಿನ ಸಂಸದರು, ಶಾಸಕರು, ಸಚಿವರು ಯಾರೂ ಈ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಕೇವಲ ಕಚೇರಿಯಲ್ಲಿ ಕುಳಿತು ಫೋಟೋ ತೆಗೆಸಿಕೊಳ್ಳುವುದಲ್ಲ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಆಶಾ ಅಕ್ಕಂದಿರ ಹೋರಾಟ ನ್ಯಾಯಯುತವಾದದ್ದು. ಅದಕ್ಕೆ ಎಲ್ಲಾ ಜನಪ್ರತಿನಿಧಿಗಳು ಬೆಂಬಲ ನೀಡಿ, ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮೈಸೂರು ಕನ್ನಡ ವೇದಿಕೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಮಾಡಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮೈಸೂರಿನಿಂದಲೇ ಬೃಹತ್ ಬೆಂಬಲ ನೀಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಆಶಾ ಅಕ್ಕಂದಿರ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಸ್. ಬಾಲಕೃಷ್ಣ ಅವರು ಸ್ಪಷ್ಟಪಡಿಸಿದರು.ಪ್ರತಿಭಟನೆಯಲ್ಲಿ ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಎಲ್.ಐ.ಸಿ ಸಿದ್ದಪ್ಪ, ಗೋವಿಂದರಾಜು, ಬೀಡ ಬಾಬು, ಹೊನಕೆರೆ ಸ್ವಾಮಿ, ಕಾವೇರಮ್ಮ, ಮಾಲಿನಿ, ರಮೇಶ್, ಗೋಪಿ, ಚಿನ್ನಪ್ಪ, ಶಿವೇಗೌಡ, ಹರೀಶ್, ಶಿವಕುಮಾರ್ ಸ್ವಾಮಿ, ಸಾಯಿ ಚಾಮರಾಜು, ಮಹದೇವ್, ಸುನಿಲ್, ಸ್ವಾಮಿ ಗೈಡ್, ಹರೀಶ್ ಕುಮಾರ್ ಮುಂತಾದವರಿದ್ದರು.
ಸಂಬಂಧಿತ ಸುದ್ದಿಗಳು

ಹಂಪಾಪುರ ಕೊನೆ ಭಾಗದ ವಿವಿಧ ಗ್ರಾಮಗಳ ನಾಲೆಯ ಕೊನೆ ಹಂತಕ್ಕೆ ನಾಳೆಯೊಳಗೆ ನೀರು ಹರಿಸಿ ಇಲ್ಲದಿದ್ದಲ್ಲಿ ಮಂಗಳವಾರ ಕೆ.ಆರ್.ನಗರ ಪಟ್ಟಣ ಬಂದ್ಗೆ ಕರೆ : ರೈತರ ಎಚ್ಚರಿಕೆ
ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ : ತಾಲೂಕಿನ ಹಂಪಾಪುರ ಕೊನೆಭಾಗದ ವಿವಿಧ ಗ್ರಾಮಗಳ ನಾಲೆಯ ಕೊನೆಹಂತಕ್ಕೆ ನೀರುಹರಿಸಿ ಕೈಗೆ ಬಂದಿರು…
◷ 28/11/2026
ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಂಧಾನ ಸಭೆ ಯಶಸ್ವಿ
ಬೆಂಗಳೂರು: ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. 2,000 ರೂ. ಪ್ರೋತ್ಸಾಹ …
◷ 28/11/2026
ನನಗೆ ಸಿಕ್ಕಿರುವ ಅಧಿಕಾರ ನಿಮ್ಮದು; ನನ್ನದು ಮಾನವ ಜಾತಿ ಮಾತ್ರ : ಕನಕಪುರದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್
ರಾಮನಗರ: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕನಕಪುರದ ಮುನ್ಸಿಪಲ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ…
◷ 28/11/2026
57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ಸಮಾರೋಪ ; ‘ವಿ ಆರ್ ಆಲ್ ಸ್ಟ್ರೇಂಜರ್ಸ್’ ಸಮಾರೋಪ ಚಿತ್ರ
ಪಣಜಿ: ಜಗತ್ತಿನಾದ್ಯಂತದ ಸಿನಿಮಾಗಳು ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಂದೇ ವೇದಿಕೆಗೆ ತಂದ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ…
◷ 28/11/2026
