ಓಟಿಟಿ ಮತ್ತು ಸಿನಿಮಾ ನಡುವಿನ ಅಂತರ ಈಗ ಕೊನೆಗೊಳ್ಳಬೇಕು : ನಟಿ ನೀನಾ ಗುಪ್ತಾ

ಪಣಜಿ : 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI 2026) ಬಹುನಿರೀಕ್ಷಿತ ವೆಬ್ ಸರಣಿ ‘ಪಂಚಾಯತ್ ಸೀಸನ್ 5’ರ ಮೊದಲ ಸಂಚಿಕೆಯ ವರ್ಲ್ಡ್ ಪ್ರೀಮಿಯರ್ ಮತ್ತು ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನಕ್ಕೂ ಮುನ್ನ ನಟಿ ನೀನಾ ಗುಪ್ತಾ ಮತ್ತು ನಟ ಫೈಸಲ್ ಮಲಿಕ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ನೀನಾ ಗುಪ್ತಾ, "ಓಟಿಟಿ ಮತ್ತು ಸಿನಿಮಾ ನಡುವಿನ ಅಂತರ ಈಗ ಕೊನೆಗೊಳ್ಳಬೇಕು, ಏಕೆಂದರೆ ಅಂತಿಮವಾಗಿ ಇವೆರಡೂ ಒಂದೇ ಮಾಧ್ಯಮ," ಎಂದು ಅಭಿಪ್ರಾಯಪಟ್ಟರು. ಚಿತ್ರರಂಗ ಮತ್ತು ವೆಬ್ ಸರಣಿಗಳ ಲೋಕದಲ್ಲಿ ಟ್ರೆಂಡ್‌ಗಳು ಸದಾ ಬದಲಾಗುತ್ತಿರುತ್ತವೆ ಎಂದ ಅವರು, "ಇದು ಒಂದು ರೀತಿಯ ವೃತ್ತದಂತೆ (ಸರ್ಕಲ್). ಒಮ್ಮೆ ಒಂದು ಶೈಲಿಯ ಚಿತ್ರ ಯಶಸ್ವಿಯಾದರೆ, ಎಲ್ಲರೂ ಅದೇ ರೀತಿಯ ಚಿತ್ರಗಳನ್ನು ಮಾಡಲು ಶುರುಮಾಡುತ್ತಾರೆ. ನಂತರ ಅದರ ಕಾಲ ಮುಗಿಯುತ್ತದೆ. ಒಂದು ಕಾಲದಲ್ಲಿ 'ಯಂಗ್ ಆಂಗ್ರಿ ಮ್ಯಾನ್' ಶೈಲಿಯ ಸಿನಿಮಾಗಳು ಬರುತ್ತಿದ್ದವು, ಆಮೇಲೆ ಬೇರೇನೋ ಬಂತು. ಇಲ್ಲಿ ಕಾಲಚಕ್ರ ಉರುಳುತ್ತಿರುತ್ತದೆ, ಒಬ್ಬರು ಬರುತ್ತಾರೆ, ಇನ್ನೊಬ್ಬರು ಹೋಗುತ್ತಾರೆ," ಎಂದು ವಿವರಿಸಿದರು. ಅಲ್ಲದೆ, ಹೊಸ ಚಿತ್ರನಿರ್ಮಾಪಕರು ಮತ್ತು ಕಲಾವಿದರಿಗೆ ಇಫ್ಫಿ (IFFI) ಒಂದು ಅತ್ಯುತ್ತಮ ಅಂತಾರಾಷ್ಟ್ರೀಯ ವೇದಿಕೆಯಾಗಿದೆ ಎಂದು ಅವರು ಶ್ಲಾಘಿಸಿದರು. ಇದೇ ವೇಳೆ ಮಾತನಾಡಿದ ನಟ ಫೈಸಲ್ ಮಲಿಕ್, ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ-2’ರಲ್ಲಿ ತಾವು ಕುಂಭಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಬಹಿರಂಗಪಡಿಸಿದರು. 'ಪಂಚಾಯತ್' ಪ್ರದರ್ಶನದ ಕುರಿತು ಸಂತಸ ಹಂಚಿಕೊಂಡ ಅವರು, "ಕಳೆದ ಬಾರಿಯೂ ಇಫ್ಫಿಯಲ್ಲಿ ನಮ್ಮ ಸರಣಿಗೆ 'ಅತ್ಯುತ್ತಮ ವೆಬ್ ಸರಣಿ' ಪ್ರಶಸ್ತಿ ಲಭಿಸಿತ್ತು. ಪ್ರೇಕ್ಷಕರಿಂದ ಈಗಾಗಲೇ ಸಾಕಷ್ಟು ಪ್ರೀತಿ ಸಿಕ್ಕಿದೆ, ಈಗ ನಡೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ," ಎಂದರು.‘ರಾಮಾಯಣ-2’ ಚಿತ್ರದ ಬಗ್ಗೆ ಮಾತನಾಡುತ್ತಾ, "'ರಾಮಾಯಣ'ದಂತಹ ದೊಡ್ಡ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಅತೀವ ಸಂತಸ ತಂದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಗ್ರಾಫಿಕ್ಸ್, ಲುಕ್ಸ್ ಮತ್ತು ಅದ್ಧೂರಿತನದ ವಿಚಾರದಲ್ಲಿ ಇದಕ್ಕಿಂತ ಉತ್ತಮ ಸಿನಿಮಾ ಬಂದಿಲ್ಲ ಎಂದು ನನಗನಿಸುತ್ತದೆ. ಚಿತ್ರಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಇನ್ನು ನಾಲ್ಕು ತಿಂಗಳ ನಂತರ ಶೂಟಿಂಗ್ ಆರಂಭಿಸಲಿದ್ದೇವೆ," ಎಂದು ಮಾಹಿತಿ ನೀಡಿದರು.
ಸಂಬಂಧಿತ ಸುದ್ದಿಗಳು

57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ಸಮಾರೋಪ ; ‘ವಿ ಆರ್ ಆಲ್ ಸ್ಟ್ರೇಂಜರ್ಸ್’ ಸಮಾರೋಪ ಚಿತ್ರ
ಪಣಜಿ: ಜಗತ್ತಿನಾದ್ಯಂತದ ಸಿನಿಮಾಗಳು ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಂದೇ ವೇದಿಕೆಗೆ ತಂದ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ…
◷ 28/11/2026
ಮತ್ತೆ ಒಂದಾದ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಜೋಡಿ : ಎಸ್. ನಾರಾಯಣ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿ ಶ್ರುತಿ!
ಬೆಂಗಳೂರು: ಕನ್ನಡ ಚಿತ್ರರಂಗದ 'ಕಲಾಸಾಮ್ರಾಟ್' ಖ್ಯಾತಿಯ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಮುಂದಿನ ಸಿನಿಮಾದ ಕುರಿತು ಚಿತ್ರತಂಡ…
◷ 27/11/2026
ಮತ್ತೆ ನಿರ್ದೇಶನದತ್ತ ಮುಖ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ!
ಬೆಂಗಳೂರು: ‘ಯುಐ’ ಸಿನಿಮಾದ ಬಳಿಕ ಕೇವಲ ನಟನೆಯಲ್ಲಿ ಬ್ಯುಸಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ನಿರ್ದೇಶಕನ ಕ್ಯಾಪ್ ತೊಡಲು ಸ…
◷ 25/11/2026
ಸ್ಥಳೀಯ ಚಿತ್ರ ನಿರ್ಮಾಪಕರಿಗೆ ಜಾಗತಿಕ ಪ್ರೇಕ್ಷಕರನ್ನು ತಲುಪಲು IFFI ಸ್ಫೂರ್ತಿ ನೀಡುತ್ತದೆ : ನಿರ್ದೇಶಕ ಕಿಶೋರ್ ಅರ್ಜುನ್
ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ತಮ್ಮ 'ದರ್ಯಾ' (Daryaa) ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗಿರ…
◷ 24/11/2026
