ವಿನಯ್ ದೊಡ್ಡಕೊಪ್ಪಲು 

ಕೆ.ಆರ್.ನಗರ : ತಾಲೂಕಿನ ಹಂಪಾಪುರ ಕೊನೆಭಾಗದ ವಿವಿಧ ಗ್ರಾಮಗಳ ನಾಲೆಯ ಕೊನೆಹಂತಕ್ಕೆ ನೀರುಹರಿಸಿ ಕೈಗೆ ಬಂದಿರುವ ಭತ್ತದ ಬೆಳೆಯನ್ನು ಉಳಿಸಿ ರೈತರಿಗೆ ನೆರವಾಗುವಂತೆ ಒತ್ತಾಯಿಸಿ ರೈತರು ಹಂಪಾಪುರ ಗ್ರಾಮದ ಬಳಿಯ ನೀರಿಲ್ಲದೆ ಒಣಗುತ್ತಿರುವ ಭತ್ತದ ಬೆಳೆಯ ನಡುವೆ ನಿಂತು ಪ್ರತಿಭಟನೆ ನಡೆಸಿದರಲ್ಲದೆ, ಈ ಸಂಬಂಧ ನಾಳೆಯೊಳಗೆ ನೀರು ಹರಿಸದಿದ್ದಲ್ಲಿ ಮಂಗಳವಾರ ಕೆ.ಆರ್.ನಗರ ಪಟ್ಟಣ ಬಂದ್‌ಗೆ ಕರೆನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ರೈತರು ಸಮರ್ಪಕವಾಗಿ ನೀರು ಹರಿಸದ ಕಾರಣ ಈಗಾಗಲೆ ಭತ್ತದ ಬೆಳೆ ಕೈಗೆ ಬಂದಿದ್ದು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರಲ್ಲದೆ, ಮುಂಗಾರಿನಲ್ಲಿ ನೀರು ಹರಿಸುವುದು ತಡವಾದ ಕಾರಣ ನಾಲೆಯ ಕೊನೆಹಂತಕ್ಕೆ ನೀರು ಹರಿಯದ ಕಾರಣ ಬೆಳೆದ ಭತ್ತ ಜೊಳ್ಳಾಗುವಂತಾಗಿದೆ. ಆದ್ದರಿಂದ ಇನ್ನೂ ಹದಿನೈದು ದಿನಗಳು ನೀರು ಹರಿಸಿದಲ್ಲಿ ಜೊಳ್ಳಾಗುವ ಭತ್ತ ಕಾಳುಕಟ್ಟಿ ರೈತರು ಉಳಿಯುವಂತಾಗುತ್ತದೆ  ಇಲ್ಲವೆ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬರಪರಿಸ್ಥಿತಿಯಲ್ಲಿ ರೈತರು ತಮ್ಮ ಮನೆಯಲ್ಲಿನ ಚಿನ್ನದ ಒಡವೆ ಗಿರವಿ ಇಟ್ಟು ಹಾಗೂ ಸಾಲಸೋಲ ಮಾಡಿ ಕಷ್ಟಪಟ್ಟು ಭತ್ತ ಬೆಳೆದಿದ್ದು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಇನ್ನೂ ಹದಿನೈದು ದಿನಗಳ ಕಾಲ ನೀರು ಹರಿಸಿದಲ್ಲಿ ಈ ಭಾಗದ ರೈತರು ಬದುಕಿಕೊಳ್ಳುತ್ತಾರೆ. ತಪ್ಪಿದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಇಲ್ಲವೆ ವಿಷಸೇವನೆ ಮಾಡಬೇಕಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಈ ಭಾಗದ ಮಂಚನಹಳ್ಳಿ, ಹಂಪಾಪುರ, ಬಡಕನಕೊಪ್ಪಲು, ದೊಡ್ಡಕೊಪ್ಪಲು, ಬಾಲೂರು, ಅರ್ಜುನಹಳ್ಳಿ, ಕಲ್ಯಾಣಪುರ, ಸನ್ಯಾಸಿಪುರ ಸೇರಿದಂತೆ ವಿವಿಧ ಗ್ರಾಮಗಳ ಕೊನೆಹಂತದ ಸುಮಾರು ಎರಡೂವರೆ ಸಾವಿರ ಎಕರೆಗೂ ಅಧಿಕ ಬೆಳೆಗೆ ನೀರು ಬೇಕಾಗಿದ್ದು ರೈತರು ನಾಲೆಯಲ್ಲಿ ನೀರು ಬರುವುದನ್ನು ಎದುರು ನೋಡುತ್ತಿದ್ಧಾರೆ ಆದರೆ ನೀರಾವರಿ ಇಲಾಖೆ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಇತ್ತ ಒಮ್ಮೆಯೂ ತಿರುಗಿ ನೋಡಿಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿ ಮತ್ತು ಶಾಸಕರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸೋಮವಾರದೊಳಗೆ ಈ ಭಾಗದ ನಾಲೆಗಳಿಗೆ ನೀರು ಹರಿಸಬೇಕು. ತಪ್ಪಿದಲ್ಲಿ ಡಿ.೧ರ ಮಂಗಳವಾರ ಕೆ.ಆರ್.ನಗರ ಬಂದ್‌ಮಾಡಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  ರೈತರು ಅಂದು ಕರೆನೀಡುವ ಬಂದ್‌ಗೆ ಪಟ್ಟಣದ ವರ್ತಕರು, ವಾಹನ ಮಾಲೀಕರು, ಆಟೋಚಾಲಕರು, ಸಾರ್ವಜನಿಕರು ಹಾಗೂ ಸಾರಿಗೆ ಇಲಾಖೆಯವರು ಸಹಕರಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ರೈತ ಮುಖಂಡ ಮಂಚನಹಳ್ಳಿ ಗಿರೀಶ್, ಲೋಕೇಶ್, ಪ್ರಪುಲ್ಲ, ಗೋವಿಂದ ಸುನೀಲ್, ಜಗದೀಶ್, ಮಧುಸೂಧನ್, ಕೃಷ್ಣೇಗೌಡ, ರಾಘವೇಂದ್ರ, ಯೋಗೇಶ್, ಜಲೇಂದ್ರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.