<b>ಮೈಸೂರು :</b> ಕರ್ನಾಟಕ ರಾಜ್ಯೋತ್ಸವ ಕನ್ನಡ ನಾಡಿನ ಇತಿಹಾಸ, ಕನ್ನಡ ಭಾಷೆಯ ಶ್ರೀಮಂತಿಕೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಸ್ಮರಿಸುವ ಪವಿತ್ರ ದಿನ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಡಾ: ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.ಅವರು ಇಂದು ಮೈಸೂರು ನಗರದ ಓವಲ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿ ಪೆರೇಡ್ ಪರಿವೀಕ್ಷಿಸಿ ನಂತರ ಮಾತನಾಡಿದರು.ನವೆಂಬರ್ 1 ಕನ್ನಡಿಗರ ಪಾಲಿಗೆ ಕೇವಲ ಒಂದು ಹಬ್ಬವಲ್ಲ. ಇದು ನಮ್ಮ ಭಾಷೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುವ ದಿನ. ನಮ್ಮ ನಾಡಿನ ಇತಿಹಾಸವನ್ನು ನೆನಪಿಸಿಕೊಳ್ಳುವ ದಿನ. ಕನ್ನಡದ ಏಕತೆ, ಸಮಗ್ರತೆ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸುವ ದಿನ ಎಂದರು.ವಿವಿಧ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ 1956 ರ ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973 ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.ಈ ಐತಿಹಾಸಿಕ ಬೆಳವಣಿಗೆಯ ಹಿಂದೆ ಅನೇಕ ಮಹನೀಯರ ಪರಿಶ್ರಮ, ಹೋರಾಟ ಮತ್ತು ತ್ಯಾಗಗಳಿವೆ. ಆಲೂರು ವೆಂಕಟರಾವ್ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು ಕನ್ನಡ ಭಾಷಿಕರ ಏಕೀಕರಣಕ್ಕಾಗಿ ಶ್ರಮಿಸಿದರು.ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟವು ಕೇವಲ ಭೌಗೋಳಿಕ ಗಡಿಗಳನ್ನು ರೂಪಿಸುವ ಪ್ರಯತ್ನವಾಗಿರಲಿಲ್ಲ. ಕನ್ನಡಿಗರ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಮಹತ್ವದ ಚಳವಳಿಯಾಗಿತ್ತು. ಆ ಮಹನೀಯರ ಕನಸುಗಳನ್ನು ನನಸಾಗಿಸುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಪುರಂದರದಾಸ, ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತರು ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನ ಸಾಹಿತ್ಯವು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದೆ. ದಾಸ ಸಾಹಿತ್ಯವು ಭಕ್ತಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದೆ ಎಂದರು.ರಾಷ್ಟçಕವಿ ಕುವೆಂಪು ಅವರು ಕನ್ನಡದ ಮೂಲಕವೇ ವಿಶ್ವ ಮಾನವರಾದರು. ಕನ್ನಡದ ಮೂಲಕ ಸಾಹಿತ್ಯ ಕೃಷಿ ಮಾಡಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟದ್ದು ಮಾತ್ರವಲ್ಲ. ಇಡೀ ದೇಶದ ಸಾಹಿತ್ಯಲೋಕ ಕರ್ನಾಟಕದ ಕಡೆಗೆ, ಕನ್ನಡದ ಕಡೆಗೆ ತಿರುಗಿನೋಡುವಂತೆ ಮಾಡಿದರು ಎಂದರು.

ಕನ್ನಡ ಭಾಷೆಯನ್ನು ನಾವು ದೈನಂದಿನ ಬದುಕಿನಲ್ಲಿ ಎಷ್ಟು ಪ್ರೀತಿಯಿಂದ ಬಳಸುತ್ತೇವೆ, ಮಕ್ಕಳಿಗೆ ಎಷ್ಟು ಪರಿಣಾಮಕಾರಿಯಾಗಿ ಕಲಿಸುತ್ತೇವೆ ಮತ್ತು ಆಧುನಿಕ ಜಗತ್ತಿಗೆ ಹೊಂದುವAತೆ ಎಷ್ಟು ಬೆಳೆಸುತ್ತೇವೆ ಎಂಬುದರಲ್ಲಿಯೂ ಇದೆ.ಮನೆಯಲ್ಲಿಯೇ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡ ಸಾಹಿತ್ಯ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಇತರ ಭಾಷೆಗಳನ್ನು ಕಲಿಯುವುದು ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ. ಆದರೆ ಅದಕ್ಕಾಗಿ ನಮ್ಮ ಮಾತೃಭಾಷೆಯನ್ನು ಕಡೆಗಣಿಸಬೇಕಾದ ಅಗತ್ಯವಿಲ್ಲ. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳಿಗೂ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜನನ - ಮರಣ ಪ್ರಮಾಣ ಪತ್ರವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಪ್ರಾರಂಭ ಮಾಡಿದ್ದು, ಈ ಸಂಬAಧ ಮೈಸೂರು ಮಹಾನಗರ ಪಾಲಿಕೆಯು, ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ ಎಂದರು.

  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಜಾಸೇವಾ ವಿಶೇಷ ಇ-ಖಾತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇವಲ ರೂ. 175/- ಶುಲ್ಕ ಪಾವತಿಸಿಕೊಂಡು 72 ಘಂಟೆಯೊಳಗಾಗಿ ಒಟ್ಟು 590 ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇ-ಖಾತಾ ದಾಖಲೆ ವಿತರಿಸುವ ಮೂಲಕ ನಗರ ಪಾಲಿಕೆ ಇ-ಖಾತಾ ಅಭಿಯಾನವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಈವರೆಗೆ ಸುಮಾರು 78000 ‘ಎ’ ಮತ್ತು ‘ಬಿ’ ಖಾತಾ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ ರೂ.210 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಅಭಿಯಾನವನ್ನು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ- 18, ಹೋಬಳಿ ಮಟ್ಟದಲ್ಲಿ -25, ತಾಲ್ಲೂಕು ಮಟ್ಟದಲ್ಲಿ- 6 ಸೇರಿದಂತೆ ಒಟ್ಟು 49 ಪ್ರಜಾಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿರುತ್ತದೆ. ಈ ಅಭಿಯಾನದಲ್ಲಿ ಸಾರ್ವಜನಿಕರಿಂದ 3846 ಅರ್ಜಿಗಳನ್ನು ಸ್ವೀಕರಿಸಿ, 3532 ಅರ್ಜಿಗಳನ್ನು ಈಗಾಗಲೇ ವಿಲೇವಾರಿ  ಮಾಡಲಾಗಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ 30 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡು ಚಾಲ್ತಿಯಲ್ಲಿವೆ. 13 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಹೊಸದಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, 3 ಯೋಜನೆಗಳು ಮುಕ್ತಾಯದ ಹಂತದಲ್ಲಿರುತ್ತವೆ. 13 ಯೋಜನೆಗಳು ಅನುಷ್ಠಾನಗೊಂಡ ನಂತರ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಂಸ್ಕರಿಸಿದ ನದಿ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.

ವಿಬಿ.ಜಿ ರಾಮ್,ಜಿ ಯೋಜನೆಯಡಿ 2026-27 ನೇ ಸಾಲಿನಲ್ಲಿ 3401 ಕಾಮಗಾರಿಗಳನ್ನು ಕೈಗೊಂಡು, 20592 ಕುಟುಂಬಗಳಿಗೆ 4.88 ಲಕ್ಷ ದಿನಗಳನ್ನು ಸೃಜಿಸಲಾಗಿರುತ್ತದೆ ಹಾಗೂ15.28 ಕೋಟಿ ರೂ ವೆಚ್ಚ ಪಾವತಿಸಲಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.

ಗ್ರಾಮಾನುಭವ ಕಾರ್ಯಕ್ರಮಕ್ಕೆ ಚಾಲನೆ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಹಾಗೂ ನೆಲದ ಸಂಬಂಧದ  ಅರಿವು ಮೂಡಿಸುವ ಗ್ರಾಮಾನುಭವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ:  ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಶಾಸಕ ಸಿ.ಎನ್ ಮಂಜೇಗೌಡ, ರಘು(ಕೌಟಿಲ್ಯ), ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ,   ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ಕನ್ನಡ ಪರ ಹೋರಾಟಗಾರರು ಗಣ್ಯರು ಉಪಸ್ಥಿತರಿದ್ದರು.