ಅಗತ್ಯ ವಸ್ತುಗಳ ಬೆಲೆ ಇಳಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ: ಶೋಭಾ ಕರಂದ್ಲಾಜೆ ಆಗ್ರಹ

<b>ಬೆಂಗಳೂರು</b>: ರಾಜ್ಯದಲ್ಲಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹೆಚ್ಚಳವಾಗಿರುವ ಎಲ್ಲ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಕೂಡಲೇ ಅಧಿಕಾರ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ.ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಾಲಿನ ಬೆಲೆ ಏರಿಕೆ ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಆಡಳಿತ ಕೆಲವೇ ತಿಂಗಳಲ್ಲಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತಿಲ್ಲ ಎಂದು ಟೀಕಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಜನರ ಬದುಕನ್ನು ಅಳೆಯಬಾರದು. ಹಾಲಿನ ದರ ಏರಿಕೆಯಿಂದ ಕೂಲಿ ಕಾರ್ಮಿಕರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ದುಡಿಯುವ ವರ್ಗದ ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಸಾಮಾನ್ಯ ಕುಟುಂಬಗಳು ಸಂಬಳದಲ್ಲಿ ಮನೆ ಬಾಡಿಗೆ, ವಿದ್ಯುತ್, ನೀರು ಮತ್ತು ಕಸದ ಬಿಲ್ ಪಾವತಿಸಬೇಕಿದೆ. ಇಂತಹ ಸಂದರ್ಭದಲ್ಲಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ರೈತರಿಗೆ ಎಕರೆಗೆ ಕೇವಲ 2,500 ರೂ. ಪರಿಹಾರ ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ರಾಜ್ಯದಿಂದ 4,000 ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ ಎಂದು ದೂರಿದರು.
ಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಸರ್ಕಾರ ಹಾಲಿನ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಾಲಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಹಲವು ಹಂತಗಳಲ್ಲಿ ಹಾಲಿನ ದರ ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬಿದ್ದಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮತ್ತು ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಸಂಬಂಧಿತ ವಿಡಿಯೊ / Watch video
ಸಂಬಂಧಿತ ಸುದ್ದಿಗಳು

2028ರ ವಿಧಾನಸಭೆ ಚುನಾವಣೆ ಗುರಿ: ಈಗಿನಿಂದಲೇ ಸಿದ್ಧತೆ ಆರಂಭಿಸಲು ಬಿಜೆಪಿ ಮುಖಂಡರಿಗೆ ಹರೀಶ್ ದ್ವಿವೇದಿ ಸೂಚನೆ
ಬೆಂಗಳೂರು: ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತ…
◷ 02/11/2026
ನಂದಿನಿ ಮೊಸರು ಪ್ರತಿ ಲೀಟರ್ಗೆ 2 ರೂ. ಇಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ
ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ರಾಜ್ಯಾದ್ಯಂತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮುಖ್…
◷ 02/11/2026
ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಸ್ವಾಭಿಮಾನವನ್ನು ಸ್ಮರಿಸುವ ಪವಿತ್ರ ದಿನ: ಡಾ ಯತೀಂದ್ರ ಸಿದ್ದರಾಮಯ್ಯ
ನವೆಂಬರ್ 1 ಕನ್ನಡಿಗರ ಪಾಲಿಗೆ ಕೇವಲ ಒಂದು ಹಬ್ಬವಲ್ಲ
◷ 02/11/2026
ಹಾಲಿನ ದರ ಏರಿಕೆ ಅನಿವಾರ್ಯ: ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿಕೆಶಿ!
ರಾಜ್ಯದಲ್ಲಿ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿರ್ಕಾರ
◷ 01/11/2026
