ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ರಾಜ್ಯಾದ್ಯಂತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡುವಂತೆ ಸೂಚನೆ ನೀಡಿದ್ದಾರೆ.ನಂದಿನಿ ಹಾಲಿನ ದರ ಏರಿಕೆಯ ನಂತರ ಅರ್ಧ ಲೀಟರ್ ಮೊಸರಿನ ದರವನ್ನು 28 ರೂ.ನಿಂದ 34 ರೂ.ಗೆ ಹಾಗೂ ಒಂದು ಲೀಟರ್ ಮೊಸರಿನ ದರವನ್ನು 54 ರೂ.ನಿಂದ 68 ರೂ.ಗೆ ಹೆಚ್ಚಿಸಲಾಗಿತ್ತು. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊಸರಿನ ದರವನ್ನು 2 ರೂ. ಇಳಿಸಲು ಸಿಎಂ ಸೂಚಿಸಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕೆಎಂಎಫ್ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಲು ಹೇಳುತ್ತೇನೆ. ಹಾಲಿನ ಬೆಲೆ ಪ್ಯಾಕೆಟ್‌ಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು.

ಇದೇ ವೇಳೆ ಹಾಲಿನ ದರ ಹೆಚ್ಚಳದ ನಿರ್ಧಾರಕ್ಕೆ ಕೆಎಂಎಫ್ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ಗೆ 7 ರೂ. ಖರೀದಿ ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರಿಗೆ ಅನ್ವಯಿಸುವ ಎಂಆರ್‌ಪಿ ದರವನ್ನೂ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಸುಮಾರು 11 ಲಕ್ಷ ಹೈನುಗಾರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಚಿವರು, ಶಾಸಕರು, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸೇರಿದಂತೆ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.