ಚಿತ್ರದುರ್ಗ : ಜಿಲ್ಲೆಯ ಹಿರಿಯೂರಿನ ಧರ್ಮಪುರದಲ್ಲಿ ಇಂದು  2,328 ಕೋಟಿ ರೂ. ವಿವಿಧ ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌  ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ, ನಾನು ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ ಎಂದು   ಹೇಳಿದ್ದಾರೆ.ಹಿರಿಯೂರು ತಾಲೂಕಿನಲ್ಲಿ  ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಕೊಟ್ಟಾಗ ವಿರೋಧ ಪಕ್ಷದವರು ನಕ್ಕರು. ಆದರೆ ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಕೊಟ್ಟಿದೆ. ಎಲ್ಲಾ ತಾಯಂದಿರು ಉಚಿತವಾಗಿ ಓಡಾಡುತಿದ್ದಾರೆ. 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಈ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕನಕಪುರದಷ್ಟೇ ಮುಖ್ಯ ಹಿರಿಯೂರು ಕ್ಷೇತ್ರ. ಹಿರಿಯೂರು ಉಪ ಚುನಾವಣೆಯಲ್ಲಿ ಅವರು ಇಬ್ಬರು ಸೇರಿ ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿ ನಿಲ್ಲಿಸುತ್ತಾರೆ ಎಂದು ನನಗೆ ಗೊತ್ತಿದೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ. ನೀವು ನನ್ನ ಕೈ ಹಿಡಿಯುತ್ತೀರಲ್ಲ? ನನಗೆ ಮೋಸ ಮಾಡಲ್ವಲ್ಲ ಎಂದು ಜನತೆಗೆ ಪ್ರಶ್ನಿಸಿದರು.ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿದ್ದೇನೆ. ಇವತ್ತು ಡಿ.ಸುಧಾಕರ್ ಇದ್ದಿದ್ದರೆ ಸಂತೋಷ, ಆನಂದ ಪಡುತ್ತಿದ್ದರು. ತಾನು ಮಂತ್ರಿ ಆಗದಿದ್ದರೂ ಪರವಾಗಿಲ್ಲ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಎಲ್ಲರ ಮುಂದೆ ಘೋಷಣೆ ಮಾಡಿದ್ದರು. ನಾನು ಬರಿಗೈಯಲ್ಲಿ ಇಲ್ಲಿಗೆ ಬಂದಿಲ್ಲ, ಅಭಿವೃದ್ಧಿ ಲಕ್ಷ್ಮೀಯನ್ನು ತೆಗೆದುಕೊಂಡು ಬಂದಿದ್ದೇವೆ. 2,300 ಕೋಟಿ ರೂ. ಅಭಿವೃದ್ಧಿ ಕೆಲಸದ ಹಣ ಬಿಡುಗಡೆ ಮಾಡಿ ಬಂದಿದ್ದೇವೆ. ಈಗ ಪ್ರತಿಯೊಂದು ಊರಲ್ಲಿ, ಹಳ್ಳಿಯಲ್ಲಿ ಏನಾಗಬೇಕು ಎಂದು ಪಟ್ಟಿ ಮಾಡಿಕೊಂಡು ಕೆಲಸ ಆರಂಭಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ   ಟಿ. ರಘುಮೂರ್ತಿ,   ಕೆ.ಎಸ್. ಬಸವಂತಪ್ಪ,   ಈಶ್ವರ ಖಂಡ್ರೆ,   ಕೆ.ಹೆಚ್. ಮುನಿಯಪ್ಪ,   ಜಮೀರ್ ಅಹಮದ್ ಖಾನ್, ಡಾ. ಅಜಯ್ ಧರ್ಮಸಿಂಗ್,   ಹೆಚ್.ಸಿ. ಬಾಲಕೃಷ್ಣ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ   ಟಿ.ಬಿ. ಜಯಚಂದ್ರ ಹಾಗೂ ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.