ಬೆಂಗಳೂರು : ರಾಜ್ಯವು  ಭೀಕರ ಬರವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಬರ ಪರಿಹಾರದ   ಆರ್ಥಿಕ ನೆರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೋರಿ ಡಿಸಿಎಂ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್‌  ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ನವೆಂಬರ್ 2ರಂದು ಬರೆದಿರುವ ಪತ್ರಗಳಲ್ಲಿ ರಾಜ್ಯದ ಪರಿಷ್ಕೃತ ಒಟ್ಟು ಬರ ಪರಿಹಾರದ ಬೇಡಿಕೆಯಾದ 22,400.58 ಕೋಟಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿರುವ  ಅವರು, ಬರ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಲು, ರಾಜ್ಯದ ಮನವಿ ಪತ್ರವನ್ನು ಸಲ್ಲಿಸಲು ಹಾಗೂ ತ್ವರಿತ ಆರ್ಥಿಕ ನೆರವು ಕೋರಲು ಮೂವರ ಭೇಟಿಗೂ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿವೆ, 57.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಇದರಿಂದ 62,481.88 ಕೋಟಿ ಅಂದಾಜು ಆರ್ಥಿಕ ನಷ್ಟ ಉಂಟಾಗಿದೆ. ಈ ಸಂಕಷ್ಟದಿಂದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ರೈತರ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಆಶಯದಂತೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ಎದುರಿಸುತ್ತಿರುವ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಅಷ್ಟೇ ಗಂಭೀರವಾಗಿ ಮತ್ತು ಮಾನವೀಯ ದೃಷ್ಟಿಯಿಂದ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ನೆರವು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.ಉತ್ತಮ ಮಳೆಯಾದ ವರ್ಷದಲ್ಲಿ ನಮ್ಮ ರೈತರು ಎಷ್ಟು ಬೆಳೆ ಬೆಳೆಯುತ್ತಾರೆ ಎನ್ನುವುದಷ್ಟೇ ದೇಶದ ಪ್ರಗತಿಯ ನಿಜವಾದ ಮಾನದಂಡವಲ್ಲ. ಸಂಕಷ್ಟದ ಸಮಯದಲ್ಲಿ ನಾವು ರೈತರ ಬೆಂಬಲಕ್ಕೆ ಎಷ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎನ್ನುವುದೇ ನಿಜವಾದ ಪ್ರಗತಿಯ ಮಾನದಂಡ ಎಂದು ತಿಳಿಸಿದ್ದಾರೆ.ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಮತ್ತೊಮ್ಮೆ ಮನವಿ ಮಾಡಿರುವ ಅವರು, ಕರ್ನಾಟಕದ ರೈತರಿಗೆ ಕೇವಲ ಸಹಾನುಭೂತಿ ಅಥವಾ ಅಲ್ಪ ಪ್ರಮಾಣದ ಪರಿಹಾರದ ಹೆಚ್ಚಳ ಸಾಕಾಗುವುದಿಲ್ಲ. ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯಬೇಕು. ಅವರು ಅನುಭವಿಸಿರುವ ನಷ್ಟಕ್ಕೆ ಅನುಗುಣವಾಗಿ ನ್ಯಾಯಯುತ ಪರಿಹಾರ ಸಿಗಬೇಕು. ಭೀಕರ ಬರದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ರೈತ ಕುಟುಂಬಗಳು ಮಾತ್ರವೇ ಎದುರಿಸಬೇಕಾದ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.