ಮೈಸೂರು
:  ರಾಜ್ಯದಲ್ಲಿ
ಬ್ಯಾಡ್ಮಿಂಟನ್ ಕ್ರೀಡೆಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಹಾಗೂ ಯುವ ಆಟಗಾರರ ಕ್ರೀಡಾ ಸಾಮರ್ಥ್ಯ ಅನಾವರಣಗೊಳಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್-2026ಕ್ಕೆ
ಅದ್ಧೂರಿ ಚಾಲನೆ ದೊರೆತಿದೆ.ನಗರದ
ಕನಕದಾಸನಗರದಲ್ಲಿರುವ ಹೆಲ್ತ್ ಸಿಟಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನ.1ರಂದು ಆರಂಭಗೊಂಡಿರುವ
ಈ ಏಳು ದಿನಗಳ ರಾಜ್ಯಮಟ್ಟದ ಪಂದ್ಯಾವಳಿ ನ.7ರವರೆಗೆ ನಡೆಯಲಿದೆ.ಮೈಸೂರು
ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿರುವ ಈ ಬೃಹತ್ ಕ್ರೀಡಾಕೂಟದಲ್ಲಿ
ರಾಜ್ಯದ ವಿವಿಧ ಜಿಲ್ಲೆಗಳಿಂದ 1,120ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವು ಆಟಗಾರರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.ಇತ್ತೀಚಿನ
ವರ್ಷಗಳಲ್ಲಿ ನಡೆಯುತ್ತಿರುವ ಅತಿ ದೊಡ್ಡ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಇದೂ ಒಂದಾಗಿದ್ದು, ವಿವಿಧ ವಯೋಮಾನದ ಹಾಗೂ ವಿಭಾಗಗಳ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಿದೆ. ಮೈಸೂರು
ಭಾಗದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯ ಬೆಳವಣಿಗೆ, ಪ್ರಚಾರ ಮತ್ತು ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಅಧ್ಯಕ್ಷರಾಗಿ ಅರ್ಜುನ್ ರಂಗ, ಗೌರವ ಕಾರ್ಯದರ್ಶಿಯಾಗಿ ಎಸ್.ಜಿ.ಪ್ರಭು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯಮಟ್ಟದ ಈ ಚಾಂಪಿಯನ್‌ ಶಿಪ್‌ನ ಸಂಘಟನಾ
ಕಾರ್ಯದರ್ಶಿಯಾಗಿಯೂ ಎಸ್.ಜಿ.ಪ್ರಭು ಜವಾಬ್ದಾರಿ
ನಿರ್ವಹಿಸುತ್ತಿದ್ದಾರೆ.ಪಂದ್ಯಾವಳಿಯ
ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಬ್ಯಾಡ್ಮಿಂಟನ್ ವಿಭಾಗದ ಅಧ್ಯಕ್ಷ ಗುರುಪ್ರಸಾದ್ ಡಿ., ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ಅಂತರರಾಷ್ಟ್ರೀಯ ಆಟಗಾರ ಅರವಿಂದ್ ಭಟ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿ ಎಸ್.ಜಿ.ಪ್ರಭು ಉಪಸ್ಥಿತರಿದ್ದರು.