ಹಾಂಗ್ ಕಾಂಗ್ :  ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಶುಕ್ರವಾರ ನಡೆದ ಪಂದ್ಯದಲ್ಲಿ ಚೀನಾದ ಹು ಕೆ ಯುವಾನ್ ಮತ್ತು ಲಿನ್ ಕ್ಸಿಯಾಂಗ್ ಯಿ ಅವರನ್ನು ಮಣಿಸಿ 'ಹಾಂಗ್ ಕಾಂಗ್ ಓಪನ್ 2026'ರ ಸೆಮಿಫೈನಲ್ ಪ್ರವೇಶಿಸಿದ್ದಾರೆ.ತೀವ್ರ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿಯು 21-12, 13-21, 21-16 ಅಂತರದಿಂದ ಚೀನಾ ಜೋಡಿಯನ್ನು ಸೋಲಿಸಿ ಗೆಲುವು ದಾಖಲಿಸಿತು. ಎರಡನೇ ಗೇಮ್‌ನಲ್ಲಿ ಸೋಲು ಕಂಡರೂ, ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಭರ್ಜರಿ ಪುನರಾಗಮನ ಮಾಡಿದ ಸಾತ್ವಿಕ್-ಚಿರಾಗ್ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದರು. ಭಾರತೀಯ ಜೋಡಿಯು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ ಕೇವಲ 13 ನಿಮಿಷಗಳಲ್ಲಿ 21-12 ಅಂತರದಿಂದ ಸುಲಭ ಜಯ ಸಾಧಿಸಿತು.ಎರಡನೇ ಗೇಮ್ ನಲ್ಲಿ ಉಭಯ ತಂಡಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. 4-4 ಮತ್ತು 9-9 ರ ಸಮಬಲದ ನಂತರ ಮುನ್ನಡೆ ಸಾಧಿಸಿದ ಚೀನಾದ ಹು ಮತ್ತು ಲಿನ್, 13-11 ಹಾಗೂ 15-11 ರ ಮುನ್ನಡೆಯೊಂದಿಗೆ ಅಂತಿಮವಾಗಿ 21-13 ರಿಂದ ಗೇಮ್ ವಶಪಡಿಸಿಕೊಂಡರು.  ಮೂರನೇ ಗೇಮ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯರು ವಿರಾಮದ ವೇಳೆಗೆ 11-7 ರ ಮುನ್ನಡೆ ಕಾಯ್ದುಕೊಂಡರು. ನಂತರ 15-9 ಮತ್ತು 17-10ಕ್ಕೆ ಮುನ್ನಡೆ ಹೆಚ್ಚಿಸಿಕೊಂಡರು. ಕೊನೆಯಲ್ಲಿ ಚೀನಾ ಜೋಡಿ ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಯಮ ಕಳೆದುಕೊಳ್ಳದ ಸಾತ್ವಿಕ್ ಮತ್ತು ಚಿರಾಗ್ 21-16 ಅಂತರದಿಂದ ಗೇಮ್ ಹಾಗೂ ಪಂದ್ಯವನ್ನು ಗೆದ್ದುಕೊಂಡರು.ಮತ್ತೊಂದೆಡೆ, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿ ರಕ್ಷಿತಾ ರಾಮರಾಜ್ ಅವರು ಥೈಲ್ಯಾಂಡ್‌ನ ಪೋರ್ನ್‌ಪಾವಿ ಚೊಚುವಾಂಗ್ ವಿರುದ್ಧ 19-21, 16-21 ನೇರ ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. 53 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ 19 ವರ್ಷದ ರಕ್ಷಿತಾ ಮೊದಲ ಗೇಮ್‌ನಲ್ಲಿ 13-13 ಮತ್ತು 17-17 ರವರೆಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ಅಂತಿಮ ಹಂತದಲ್ಲಿ ತಾಳ್ಮೆಯ ಆಟವಾಡಿದ ಥೈಲ್ಯಾಂಡ್ ಆಟಗಾರ್ತಿ 21-19 ರಿಂದ ಮೊದಲ ಗೇಮ್ ಗೆದ್ದರು. ಎರಡನೇ ಗೇಮ್‌ನಲ್ಲಿ ಸತತ ನಾಲ್ಕು ಅಂಕ ಗಳಿಸಿ 14-10 ರ ಮುನ್ನಡೆ ಸಾಧಿಸಿದ ಚೊಚುವಾಂಗ್, ರಕ್ಷಿತಾಗೆ ಪುನರಾಗಮನದ ಅವಕಾಶ ನೀಡದೆ 21-16 ರಿಂದ ಪಂದ್ಯ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.