ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಮತ್ತು ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕುರಿತ ರಾಜಕೀಯ ಚರ್ಚೆಗಳ ನಡುವೆಯೇ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಒಳಗಿನ ಪರಿಸ್ಥಿತಿಗಳು ಶೀಘ್ರದಲ್ಲೇ ಸುಧಾರಿಸಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆಯಲಿದೆ ಎಂದು ಎಂದಿದ್ದಾರೆ. ಅಲ್ಲದೆ ಕಾಯುತ್ತಿರುವ ನಾಯಕರಿಗೂ ಬೆಂಬಲಿಗರಿಗೂ ಬೇಗನೇ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ಚರ್ಚೆಗೆ ಕಾರಣರಾಗಿದ್ದಾರೆ.
ಇನ್ನೂ ಕೆಲ ದಿನಗಳು ಸಹನೆಯಿಂದ ಕಾಯಬೇಕಿದೆ ಎಂದು ಹೇಳಿದ ಅವರು, ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ನಿರ್ಧಾರವೊಂದು ಚರ್ಚೆಯಲ್ಲಿದೆ ಎಂಬ ಸುಳಿವನ್ನೂ ಸಹ ಪರೋಕ್ಷವಾಗಿ ನೀಡಿದ್ದಾರೆ.
ಇದೇ ವೇಳೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಇಕ್ಬಾಲ್ ಹುಸೇನ್ ತೀವ್ರ ವಾಗ್ದಾಳಿ ನಡೆಸಿದ್ದು, ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ಮಾಡುತ್ತಿರುವ ಟೀಕೆಗಳನ್ನು ಪ್ರಶ್ನಿಸಿದ ಅವರು, ಯಾವ ನೈತಿಕತೆಯ ಆಧಾರದಲ್ಲಿ ಇಂತಹ ಹಗುರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜಕೀಯದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿದ ಇಕ್ಬಾಲ್, ನಿಖಿಲ್ ಅವರ ಹೇಳಿಕೆಗಳ ಹಿಂದೆ ಬೇರೆ ರಾಜಕೀಯ ಲೆಕ್ಕಾಚಾರಗಳಿರಬಹುದೆಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.



