ಅಯೋಧ್ಯೆ/ಲಕ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಡಬಲ್ ಇಂಜಿನ್ ಸರ್ಕಾರವು ಅಯೋಧ್ಯೆಯ ಸಾಂಸ್ಕೃತಿಕ ಗುರುತಿಗೆ ಹೊಸ ಗೌರವ ಮತ್ತು ವೈಭವವನ್ನು ನೀಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ತಿಳಿಸಿದ್ದಾರೆ. ಇದೇ ವೇಳೆ, "ನಮಗೆ ಇಡೀ ರಾಜ್ಯವೇ ಒಂದು ಕುಟುಂಬ" ಎಂದು ಅವರು ಪ್ರತಿಪಾದಿಸಿದ್ದಾರೆ.ಅಯೋಧ್ಯೆಯ ಪ್ರಸಿದ್ಧ ದೀಪೋತ್ಸವದ ಕುರಿತು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಸಿಎಂ ಯೋಗಿ, "ಶ್ರೀ ಅಯೋಧ್ಯೆ   ದೀಪೋತ್ಸವವು ಇಂದು ಭಾರತ ಮತ್ತು ವಿಶ್ವದ ನಡುವೆ ಒಂದು ಅದ್ಭುತ 'ಸಾಂಸ್ಕೃತಿಕ ರಾಮಸೇತು'ವಾಗಿ ಹೊರಹೊಮ್ಮಿದೆ. ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳ ಕಲಾವಿದರು ತಮ್ಮ ಭಾಷೆ ಮತ್ತು ಸಂಪ್ರದಾಯಗಳಲ್ಲಿ ರಾಮಕಥೆಗೆ ಜೀವ ತುಂಬುತ್ತಿದ್ದಾರೆ. ಹಲವು ನದಿಗಳು ಒಂದೇ ಸಾಗರವನ್ನು ಸೇರುವಂತೆ, ಈ ವಿವಿಧ ಸಂಸ್ಕೃತಿಗಳ ಧಾರೆಗಳು ಅಯೋಧ್ಯೆಯಲ್ಲಿ ಒಂದಾಗಿ 'ರಾಮತ್ವ'ದಲ್ಲಿ ಲೀನವಾಗುತ್ತವೆ" ಎಂದಿದ್ದಾರೆ.ಆಧುನಿಕ ತಂತ್ರಜ್ಞಾನವು ಈ ಸಾಂಸ್ಕೃತಿಕ ಸಂಗಮವನ್ನು ಮತ್ತಷ್ಟು ಭವ್ಯಗೊಳಿಸುತ್ತಿದ್ದು, ಹೊಸ ಪೀಳಿಗೆಯನ್ನು ನಮ್ಮ ಭವ್ಯ ಪರಂಪರೆಯೊಂದಿಗೆ ಜೋಡಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.   ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ :ಇದೇ ವೇಳೆ ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿಗಳು, "2017 ಕ್ಕಿಂತ ಮೊದಲು ಅಧಿಕಾರದಲ್ಲಿದ್ದವರ ಸಾಂಸ್ಕೃತಿಕ ಚಿಂತನೆಯು ಸೈಫೈ ಮಹೋತ್ಸವದಲ್ಲಿ ತಮ್ಮ ಕುಟುಂಬದ ವೈಭವವನ್ನು ಪ್ರದರ್ಶಿಸುವುದಕ್ಕಷ್ಟೇ ಸೀಮಿತವಾಗಿತ್ತು. ಶ್ರೀ ಅಯೋಧ್ಯೆ  ಮಹಾನ್ ಪರಂಪರೆ ಅವರ ಆದ್ಯತೆಯಾಗಿರಲಿಲ್ಲ. ಅವರಿಗೆ ಕುಟುಂಬವೇ ರಾಜ್ಯವಾಗಿತ್ತು, ಆದರೆ ನಮಗೆ ಇಡೀ ರಾಜ್ಯವೇ ಕುಟುಂಬವಾಗಿದೆ" ಎಂದು ತಿರುಗೇಟು ನೀಡಿದರು.ಇಂದು ದೀಪೋತ್ಸವವು ಕೇವಲ ದೀಪಗಳ ಹಬ್ಬವಲ್ಲ, ಬದಲಾಗಿ ಕೋಟ್ಯಂತರ ರಾಮಭಕ್ತರ ನಂಬಿಕೆ, ಆಧುನಿಕ ತಂತ್ರಜ್ಞಾನ ಮತ್ತು ಭಾರತದ ಸನಾತನ ಪರಂಪರೆಯ ತ್ರಿವೇಣಿ ಸಂಗಮವಾಗಿದೆ. ಇದರ ಕಾಂತಿ ಇಂದು ಇಡೀ ವಿಶ್ವಕ್ಕೆ ತಲುಪುತ್ತಿದೆ ಎಂದು ಅವರು ಹೇಳಿದರು.  ದೀಪೋತ್ಸವ-2026ರ ವಿಶೇಷತೆಗಳು:ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯ ಸರಯೂ ಘಾಟ್‌ಗಳಲ್ಲಿ ಸಾಂಪ್ರದಾಯಿಕ ದೀಪಗಳ ಬೆಳಕಿನೊಂದಿಗೆ ಆಧುನಿಕ ತಂತ್ರಜ್ಞಾನದ ಸಂಗಮ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಲ್ಟಿಮೀಡಿಯಾ ಪ್ರೊಜೆಕ್ಷನ್, ಲೇಸರ್ ಶೋ ಮತ್ತು 100ಕ್ಕೂ ಹೆಚ್ಚು ಕಲಾವಿದರಿಂದ ನೇರ ಪ್ರದರ್ಶನ ಆಯೋಜಿಸಲಾಗಿದೆ.ನವೆಂಬರ್ 7 ರಂದು  ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ದೀಪಗಳ ಬೆಳಕು, ಕೃತಕ ಬೆಳಕು, ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಶ್ರೀರಾಮನ ಅಯೋಧ್ಯೆ ಆಗಮನದ ಕಥೆಯನ್ನು ಕ್ರಮಬದ್ಧವಾಗಿ ನಿರೂಪಿಸಲಾಗುತ್ತದೆ. ಭಾರತೀಯ ಜಾನಪದ ಮತ್ತು ಶಾಸ್ತ್ರೀಯ ಕಲಾವಿದರು ದೀಪೋತ್ಸವದ ಥೀಮ್ ಆಧಾರಿತ ಉಡುಪುಗಳಲ್ಲಿ ಕಥೆ, ನೃತ್ಯ, ಸಂಗೀತ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಈ ಪ್ರದರ್ಶನ ನೀಡಲಿದ್ದಾರೆ.