ಮೈಸೂರು :  ತಾಲೂಕಿನ ಜಯಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ, ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿ ಹಾಗೂ ಮಾತನಾಡಿದರೆ ₹10,000 ದಂಡ ವಿಧಿಸಲಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವರದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯ ಗಂಭೀರವಾಗಿ ಪರಿಗಣಿಸಿತ್ತು. ಮೈಸೂರು ತಾಲೂಕು ತಹಶೀಲ್ದಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪೊಲೀಸ್ ಉಪನಿರೀಕ್ಷಕರ ತಂಡ ಜಯಪುರ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದೆ.  ತಪಾಸಣೆ ವೇಳೆ ಸಂಬಂಧಪಟ್ಟ ಕುಟುಂಬಕ್ಕೆ ಕುಡಿಯುವ ನೀರು, ರಸ್ತೆ, ವಿದ್ಯುತ್, ನ್ಯಾಯಬೆಲೆ ಅಂಗಡಿ ಪಡಿತರ, ಪಿಂಚಣಿ ಸೇರಿದಂತೆ ಯಾವುದೇ ಸಾರ್ವಜನಿಕ ಸೌಲಭ್ಯಗಳಲ್ಲಾಗಲಿ ಅಥವಾ ಗ್ರಾಮದಲ್ಲಿ ಓಡಾಡುವುದಕ್ಕಾಗಲಿ ಯಾವುದೇ ಅಡ್ಡಿ-ಆತಂಕ ಇಲ್ಲದಿರುವುದು ದೃಢಪಟ್ಟಿದೆ. ವಾಸದ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಮೈಸೂರು ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇರುವ ವೈಯಕ್ತಿಕ ಸಿವಿಲ್ ವ್ಯಾಜ್ಯವನ್ನು ಸಾಮಾಜಿಕ ಬಹಿಷ್ಕಾರ ಎಂದು ಬಿಂಬಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗಿದ್ದು, ಗ್ರಾಮದಲ್ಲಿ ಯಾವುದೇ ಸಾಮಾಜಿಕ ಬಹಿಷ್ಕಾರ ಜಾರಿಯಲ್ಲಿಲ್ಲ ಎಂದು ತಹಶೀಲ್ದಾರ್ ವರದಿ ಸಲ್ಲಿಸಿದ್ದಾರೆ.