ಬೆಂಗಳೂರು : ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ಸುಧಾರಣೆ ಆಗುವವರೆಗೆ ನವೆಂಬರ್ 15ರಂದು ನಡೆಯಲಿರುವ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು ಕೆಪಿಎಸ್‌ಸಿ ಪರೀಕ್ಷೆ  ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲೆ ಅಭ್ಯರ್ಥಿಗಳಿಗೆ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿ ಅಕ್ರಮದ ತನಿಖೆ ಪೂರ್ಣಗೊಂಡು ಸುಧಾರಣೆ ಆಗಬೇಕು.ಈಗಾಗಲೇ ಕೆಪಿಎಸ್‌ಸಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಇ.ಡಿ, ಎಸ್‌ ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಕಳೆದ ಮೂರು-ನಾಲ್ಕು ವರ್ಷಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಸಂಸ್ಥೆಯ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮೊದಲು ಗೊಂದಲಗಳನ್ನು ಸರಿಪಡಿಸಿ, ಕೆಪಿಎಸ್‌ಸಿ ವ್ಯವಸ್ಥೆ ಪ್ರಾಮಾಣಿಕವಾಗಿದೆ ಎಂಬ ವಿಶ್ವಾಸ ಮೂಡಿಸಬೇಕು. ಅಲ್ಲಿಯವರೆಗೆ ಪರೀಕ್ಷೆ ನಡೆಸಬಾರದು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆಯಾಗದ ವಿಚಾರವಾಗಿ ಮಾತನಾಡಿದ ಅವರು, ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ರಾಜ್ಯ ಸರ್ಕಾರವೂ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರಲ್ಲದೇ,ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ಗ್ರಾಂಟ್ ಬಿಡುಗಡೆ ಮಾಡಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.ಬಸ್ ಪ್ರಯಾಣ ದರ ಏರಿಕೆ ವಿಚಾರವಾಗಿ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಪತ್ರಿಕಾಗೋಷ್ಠಿ ನಡೆಸಿ ರೈತರಿಗೆ 2,500 ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಎರಡನೇ ಕಂತನ್ನೂ ನೀಡುವುದಾಗಿ ಹೇಳಿದ್ದಾರೆ. ಬಸ್ ದರ ಏರಿಕೆ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ 26 ಸಾವಿರ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಆದರೆ  ಇದಕ್ಕೆ ಹಣ ಎಲ್ಲಿದೆ? ಈಗಾಗಲೇ ಗುತ್ತಿಗೆದಾರರಿಗೆ 39 ಸಾವಿರ ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಮೊದಲು ಆ ಹಣವನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.ಹಣವಿಲ್ಲದಿದ್ದರೂ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಕಮಿಷನ್ ಪಡೆಯುವುದಕ್ಕಾಗಿಯೇ ಎಂದು ಆರೋಪಿಸಿದ ಅವರು, ಖಜಾನೆ ಲೂಟಿಯಾಗಿದೆ. ಗುತ್ತಿಗೆದಾರರನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತಿದೆ. ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆಯುವ ಮೂಲಕ ಬೇರೆ ರಾಜ್ಯದವರಿಗೆ ಕಾಮಗಾರಿಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.