ನವದೆಹಲಿ / ಬೆಂಗಳೂರು: ಸಾರ್ವಜನಿಕ ರಂಗದ ತೈಲ ಮಾರಾಟ ಸಂಸ್ಥೆಗಳು (OMC) ಪೂರೈಸುವ E20 ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಬೆರೆಸಲಾಗಿದೆ ಎಂಬ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದ್ದು, ಸರಬರಾಜಾಗುತ್ತಿರುವ ಪೆಟ್ರೋಲ್ ಭಾರತೀಯ ಮಾನಕ ಸಂಸ್ಥೆಯ (BIS) ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಇತ್ತೀಚೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿ, ರಾಜ್ಯದ ಕೆಲವು ರಿಟೇಲ್ ಔಟ್‌ಲೆಟ್‌ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡಾ 26 ರಿಂದ 31 ರಷ್ಟು ಎಥನಾಲ್ ಅಂಶ ಕಂಡುಬಂದಿದೆ ಎಂದು ಪ್ರತಿಪಾದಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೂರು ಪ್ರಮುಖ ಸಾರ್ವಜನಿಕ ರಂಗದ ತೈಲ ಕಂಪನಿಗಳು (IOCL, BPCL, HPCL) ಪೂರೈಸುವ E20 ಪೆಟ್ರೋಲ್, BIS ನಿಗದಿಪಡಿಸಿರುವ IS 17021 ಗುಣಮಟ್ಟದ ನಿಯಮಗಳಿಗೆ ಅನುಗುಣವಾಗಿದೆ.  ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 893 ಪೆಟ್ರೋಲ್ ನಮೂನೆಗಳನ್ನು (Samples) ಪರೀಕ್ಷಿಸಲಾಗಿದ್ದು, ಎಲ್ಲವೂ ನಿಗದಿತ ಮಾನದಂಡಗಳನ್ನು ಪೂರೈಸಿವೆ.  ಕರ್ನಾಟಕದಿಂದ ಸಂಗ್ರಹಿಸಲಾದ 56 ನಮೂನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲ 56 ನಮೂನೆಗಳಲ್ಲೂ ಎಥನಾಲ್ ಪ್ರಮಾಣವು ಶೇಕಡಾ 19 ರಿಂದ 20 ರಷ್ಟಿದ್ದು, IS 17021 ಮಾನದಂಡಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.