ಬೆಂಗಳೂರು :  ಯುವಜನತೆ ಸಿನಿಮಾಗಳಲ್ಲಿ ನಟರು ಸಿಗರೇಟ್ ಹಿಡಿದು ಪೋಸ್ ಕೊಡುವುದನ್ನು ನೋಡಿ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕಿವಿಮಾತು ಹೇಳಿದರು.ಬೆಂಗಳೂರಿನ ಆರೋಗ್ಯ ಸೌಧದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 4.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಟಿವಿ ಮತ್ತು ಸಿನಿಮಾಗಳಲ್ಲಿ ನಟರು ಕೇವಲ ಸಿಗರೇಟ್ ಹಿಡಿದುಕೊಂಡು ಪೋಸ್ ಕೊಡುತ್ತಾರೆ. ಅದನ್ನು ನೋಡಿ ಯುವಜನತೆ ಹಾಳಾಗಬೇಡಿ. ನಟರು ತೆರೆಯ ಮೇಲೆ ಪೋಸ್ ಕೊಟ್ಟರು ಅಂತ ನೀವು ಸಿಗರೇಟ್ ಸೇದಲು ಶುರು ಮಾಡಿದರೆ, ಮುಂದೆ ನೀವು ಆಸ್ಪತ್ರೆಯ ಐಸಿಯು (ICU) ಸೇರಬೇಕಾಗುತ್ತದೆ. ಅಂತಹ ದುಶ್ಚಟಗಳ ವಿಚಾರದಲ್ಲಿ ಸಿನಿಮಾ ನಟರನ್ನು ಎಂದಿಗೂ ಮಾದರಿಯಾಗಿ ತೆಗೆದುಕೊಳ್ಳಬೇಡಿ  ಎಂದು ಎಚ್ಚರಿಸಿದರು.ನಂತರ ತಮ್ಮ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಸಚಿವರು  ನಾನು ಯಾವುದೇ ನಿರ್ದಿಷ್ಟ ಸಿನಿಮಾ ನಟರ ಬಗ್ಗೆ ಮಾತನಾಡಿಲ್ಲ. ಇಲ್ಲಿನ ಯಾವ ನಟರೂ ಆ ರೀತಿ ಮಾಡುತ್ತಿಲ್ಲ, ಕಾಣಿಸುತ್ತಲೂ ಇಲ್ಲ. ಆದರೆ  ಹಿಂದಿ ಅಥವಾ ಇಂಗ್ಲಿಷ್ ಸಿನಿಮಾಗಳು, ನಾಟಕ ಹಾಗೂ ಇತರ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸೆಲೆಬ್ರಿಟಿಗಳು ತಂಬಾಕು ಬಳಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯುವಜನತೆ ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅದು ಅಭ್ಯಾಸವಾಗಿ ಆಸ್ಪತ್ರೆ ಸೇರಿದರೆ ಅವರ ಕುಟುಂಬಕ್ಕೆ ಯಾರು ದಿಕ್ಕಾಗುತ್ತಾರೆ? ಸೆಲೆಬ್ರಿಟಿಗಳ ಪ್ರಭಾವದಿಂದ ಯುವಕರು ಹಾಳಾಗಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದು ಸ್ಪಷ್ಟಪಡಿಸಿದರು.