ಮೈಸೂರು :  ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಗ್ರಂಥಪಾಲಕರು ಹಾಗೂ ಮಾಹಿತಿ ವಿಜ್ಞಾನಿಗಳ ಸಂಘ (MyLISA) ಮತ್ತು ಬಾಲ್ಯ ಫೌಂಡೇಶನ್ (ರಿ), ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.ಮಹಾರಾಜ ಶಾಲೆಯ ಸಂಗೀತ ಶಿಕ್ಷಕ ಆನಂದ್ ಹಾಗೂ ಅವರ ತಂಡದವರು ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಮಧುರ ಆರಂಭ ನೀಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು   ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ವೇದಿಕೆಯ ಮೇಲಿದ್ದ ಗಣ್ಯರು ಮಹಾನ್ ಗ್ರಂಥಾಲಯ ವಿಜ್ಞಾನಿ ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ  ಬಿ. ಮಂಜುನಾಥ್ ಅವರು ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉದ್ಘಾಟನಾ ಭಾಷಣ ಮಾಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಅವರು, ಗ್ರಂಥಾಲಯಗಳು ಪ್ರತಿದಿನವೂ ಜ್ಞಾನ ಮತ್ತು ಮಾಹಿತಿಯನ್ನು ಒದಗಿಸುವ ಅಮೂಲ್ಯ ಕೇಂದ್ರಗಳಾಗಿವೆ. ಗೂಗಲ್‌ನಲ್ಲಿ ಸಾವಿರಾರು ಮಾಹಿತಿಗಳು ದೊರೆಯುತ್ತವೆ. ಆದರೆ ಅವುಗಳಲ್ಲಿ ಯಾವುದು ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ಎಂಬುದನ್ನು ತಿಳಿಯಲು ಗ್ರಂಥಾಲಯದ ಪುಸ್ತಕಗಳ ಅಧ್ಯಯನ ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕ  ಹಾಗೂ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ. ಸಿ.ಪಿ. ರಾಮಶೇಷ   ಮಾತನಾಡಿ, ಪುಸ್ತಕಗಳನ್ನು ಕೊಂಡುಕೊಳ್ಳುವುದು, ಓದುವುದು ಹಾಗೂ ಓದಿದ ಜ್ಞಾನವನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಗ್ರಂಥಾಲಯ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಆಶಯವನ್ನು ರಾಷ್ಟ್ರೀಯ ಟ್ರಸ್ಟ್ ಹೊಂದಿದೆ ಎಂದು ತಿಳಿಸಿದರು. ಚೀನಾ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುತ್ತದೆ. ಅನೇಕ ದೇಶಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ ಎಂದರು. ಬ್ರಿಟನ್‌ನ ಗ್ರೀನ್ ಲೈಬ್ರರಿ ಪರಿಕಲ್ಪನೆಯ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಇಟಲಿಯಲ್ಲಿ ತಪ್ಪು ಮಾಹಿತಿ ಮತ್ತು ತಪ್ಪು ಅಂಕಿಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾಹಿತಿ ಸ್ವೀಕರಿಸುವ ಜವಾಬ್ದಾರಿ ಪ್ರತಿಯೊಬ್ಬ ಓದುಗರಿಗೂ ಇರಬೇಕು ಎಂದು ಹೇಳಿದರು.ಪ್ರಾದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್ ಅವರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಶುಭಾಶಯಗಳನ್ನು ತಿಳಿಸಿ, ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸುವ ಉದ್ದೇಶ ಮತ್ತು ಇತಿಹಾಸವನ್ನು ವಿವರಿಸಿದರು. ಮೊಬೈಲ್ ಪರದೆಯ ಮಾಹಿತಿ ಕ್ಷಣಿಕವಾಗಿರುತ್ತದೆ, ಆದರೆ ಪುಸ್ತಕದ ಪುಟಗಳ ಓದು ಜೀವನಪರ್ಯಂತ ಉಳಿಯುವ ಜ್ಞಾನವನ್ನು ನೀಡುತ್ತದೆ ಎಂದರು. ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ, ಅರಿವು ಮತ್ತು ಅನುಭವದ ಮಹತ್ವವನ್ನು ತಿಳಿಸಿದರು. ದೇವಾಲಯಗಳು ಮನಸ್ಸಿಗೆ ಶಾಂತಿ ನೀಡಿದರೆ, ಗ್ರಂಥಾಲಯಗಳು ಬದುಕಿಗೆ ವಿವೇಕ ನೀಡುತ್ತವೆ. ಹಳೆಯ ಶ್ರೇಷ್ಠ ಗ್ರಂಥಗಳ ಜೊತೆಗೆ ಆಧುನಿಕ ವಿಚಾರಗಳನ್ನೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಅಭಿರುಚಿ ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಮೈಸೂರು ರಂಗಾಯಣದ ನಿರ್ದೇಶಕರಾದ ಸಿ. ಪ್ರವೀಣ್ ಬೆಳ್ಳಿರಂಗ್ ಹಾಗೂ ತಂಡದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಲಪುರಿಯ ವಿದ್ಯಾರ್ಥಿಗಳಿಗೆ ರಂಗವೀಕ್ಷಣೆ ಮತ್ತು ರಂಗಭೂಮಿಗೆ ಸಂಬಂಧಿಸಿದ ಕಾರ್ಯಾಗಾರ ನಡೆಸಿಕೊಟ್ಟರು. ಬೆಂಗಳೂರಿನ ವಿಶ್ಲೇಷಣಾತ್ಮಕ ಮತ್ತು ಸೃಜನಶೀಲ ಸ್ಟುಡಿಯೋದ  ತಿ ಶ್ರುತಿ ಚಿನ್ನಪ್ಪ ಹಾಗೂ ತಂಡದವರು ವಿದ್ಯಾರ್ಥಿಗಳಿಗೆ ವಚನ ಗಾಯನ ಕಾರ್ಯಾಗಾರ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗ್ರಂಥಪಾಲಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಬಾಲ್ಯ ಫೌಂಡೇಶನ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳ ಜೊತೆಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ MyLISA ಅಧ್ಯಕ್ಷ ಬಸಪ್ಪ, ಬಾಲ್ಯ ಫೌಂಡೇಶನ್ ಸಂಸ್ಥಾಪಕ   ಅನಿಲ್ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ  ಸುಮಾ ಕೊಡಿಹಳ್ಳಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಹಾಗೂ MyLISA ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಗ್ರಂಥಾಲಯ ಸಹಾಯಕಿ ಕುಸುಮ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೊನೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ   ಸುಮಾ ಕೊಡಿಹಳ್ಳಿ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.ಪುಸ್ತಕಗಳು ಕೇವಲ ಅಕ್ಷರಗಳ ಸಂಗ್ರಹವಲ್ಲ, ಅವು ಬದುಕಿಗೆ ದಾರಿದೀಪವಾಗಿವೆ. ಮೊಬೈಲ್ ಜಗತ್ತಿನ ಕ್ಷಣಿಕ ಆಕರ್ಷಣೆಯಿಂದ ಹೊರಬಂದು ಪುಸ್ತಕ ಓದುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ಬೆಳೆಸುವ ಇಂತಹ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ.