ಬೆಂಗಳೂರು :  ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಅಗತ್ಯವನ್ನು ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಇಂದು ಒತ್ತಿಹೇಳಿದರು. ಮಹಿಳೆಯರು ಕೇವಲ ಭಾಗವಹಿಸುವವರಾಗಿ ಮಾತ್ರವಲ್ಲದೆ ನಾಯಕತ್ವ, ನೀತಿ ನಿರೂಪಣೆ ಮತ್ತು ಕಾನೂನು ರಚನೆಯಲ್ಲಿಯೂ ಪರಿಣಾಮಕಾರಿ ಪಾತ್ರವನ್ನು ಹೊಂದಿರಬೇಕು ಎಂದು  ಅಭಿಪ್ರಾಯಪಟ್ಟರು. 2023 ರಲ್ಲಿ ಜಾರಿಗೆ ತರಲಾದ 'ನಾರಿ ಶಕ್ತಿ ವಂದನ್ ಅಧಿನಿಯಮ'ವನ್ನು ಉಲ್ಲೇಖಿಸಿದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಪ್ರಾತಿನಿಧ್ಯ ನೀಡುವ ಅವಕಾಶವು ಅನುಷ್ಠಾನದತ್ತ ಸಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು; ಇದು ಪಂಚಾಯತ್‌ಗಳಿಂದ ಸಂಸತ್ತಿನವರೆಗೂ ಮಹಿಳಾ ನಾಯಕತ್ವ ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದರು. ಈಗಾಗಲೇ ಹಲವು ರಾಜ್ಯಗಳು ಪಂಚಾಯತ್‌ಗಳು ಮತ್ತು ನಗರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಪ್ರಾತಿನಿಧ್ಯವನ್ನು ಒದಗಿಸಿವೆ ಎಂದು ಅವರು ಹೇಳಿದರು. ಶಾಸನಸಭೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯು ಬಲಿಷ್ಠ, ಹೆಚ್ಚು ಸಂವೇದನಾಶೀಲ ಮತ್ತು ಹೊಣೆಗಾರಿಕೆಯುಳ್ಳ ಪ್ರಜಾಪ್ರಭುತ್ವವನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ. ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಸಂವೇದನಾಶೀಲತೆ, ಬದ್ಧತೆ ಮತ್ತು ಬಲವಾದ ಜವಾಬ್ದಾರಿಯ ಪ್ರಜ್ಞೆಯನ್ನು ತರುತ್ತಾರೆ; ಸಮಾಜದ ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಪರಿಹರಿಸುವಲ್ಲಿ ಈ ಗುಣಗಳು ವಿಶೇಷವಾಗಿ ಮುಖ್ಯವಾಗಿವೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದ ಶ್ರೀ ಬಿರ್ಲಾ, ನೀತಿ ನಿರೂಪಣೆ, ಶಾಸನ ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವವನ್ನು ಹೆಚ್ಚು ಸ್ಪಂದನಾಶೀಲ, ಎಲ್ಲರನ್ನೂ ಒಳಗೊಳ್ಳುವ ಮತ್ತು ಉತ್ತರದಾಯಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ (ಸಿಡಬ್ಲ್ಯುಪಿ) ಭಾರತ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನವು ಸಾಮಾಜಿಕ ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಪರಿವರ್ತಿಸುತ್ತಿವೆ ಎಂದು ತಿಳಿಸಿದ ಅವರು, ಅವುಗಳನ್ನು ಜವಾಬ್ದಾರಿಯುತವಾಗಿ ಮತ್ತು ಹೊಣೆಗಾರಿಕೆಯಿಂದ ಬಳಸಿದಾಗ ಆಡಳಿತದಲ್ಲಿ ಗಣನೀಯ ಸುಧಾರಣೆ ತರಬಲ್ಲವು ಎಂದು ಹೇಳಿದರು. ಜನಪ್ರತಿನಿಧಿಗಳು ನಾಗರಿಕರೊಂದಿಗಿನ ತಮ್ಮ ಸಂವಾದವನ್ನು ಬಲಪಡಿಸಲು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಕಾಲಿಕ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಮತ್ತು ಇ-ಆಡಳಿತವನ್ನು ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಪಾರದರ್ಶಕ, ಹೊಣೆಗಾರಿಕೆಯುಳ್ಳ ಮತ್ತು ದಕ್ಷ ಆಡಳಿತ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಸಂಸದೀಯ ಸಮಿತಿಗಳು 'ಮಿನಿ ಸಂಸತ್ತು'ಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಉಲ್ಲೇಖಿಸಿದ ಲೋಕಸಭಾಧ್ಯಕ್ಷರು, ಈ ಸಮಿತಿಗಳು ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆಗಳನ್ನು ನೀಡಿವೆ ಮತ್ತು ಸರ್ಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿವೆ ಎಂದು ಹೇಳಿದರು. ಎಐ ಮತ್ತು ತಂತ್ರಜ್ಞಾನವು ಅವುಗಳ ಮೇಲ್ವಿಚಾರಣೆ ಮತ್ತು ಪರಿಶೀಲನಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಬಲ್ಲದು ಹಾಗೂ ಅವುಗಳ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಲ್ಲದು. ಈ ನಿಟ್ಟಿನಲ್ಲಿ ಮಹಿಳಾ ಸಂಸದರು ಮತ್ತು ಶಾಸಕರ ತಿಳುವಳಿಕೆ ಹಾಗೂ ಸಾಮರ್ಥ್ಯಗಳನ್ನು ಹೆಚ್ಚಿಸಲು ಎಐ ಮತ್ತು ತಂತ್ರಜ್ಞಾನದ ಕುರಿತು ವಿಶೇಷ ಅಧಿವೇಶನವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನಾದ್ಯಂತ ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಸಾಮರ್ಥ್ಯವನ್ನು ಬಲಪಡಿಸಲು ಸಾಂಸ್ಥಿಕ ಚೌಕಟ್ಟನ್ನು ರೂಪಿಸುವ ಅಗತ್ಯವಿದೆ ಎಂದು ಲೋಕಸಭಾಧ್ಯಕ್ಷರು ಪ್ರತಿಪಾದಿಸಿದರು. ಪಂಚಾಯತ್ ಸರಪಂಚರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು, ಆಡಳಿತದ ಮೇಲ್ವಿಚಾರಣೆ ಮಾಡಲು ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಈ ಉಪಕ್ರಮ ಗಮನಹರಿಸಬೇಕು ಎಂದು ಅವರು ತಿಳಿಸಿದರು. ಸಾರ್ವಜನಿಕ ಪ್ರತಿನಿಧಿಗಳು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯವು ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ತಳಮಟ್ಟದ ಜನರಿಗೆ ಒದಗಿಸುವ ಸೇವೆಗಳ ಫಲಿತಾಂಶಗಳ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಶ್ರೀ ಬಿರ್ಲಾ ಒತ್ತಿಹೇಳಿದರು. ಉದಯೋನ್ಮುಖ ಮಹಿಳಾ ನಾಯಕರಿಗೆ ಮಾರ್ಗದರ್ಶನ ನೀಡಲು ಹಾಗೂ ಅವರ ಶಾಸನಾತ್ಮಕ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಬಲಪಡಿಸಲು ಅನುಭವಿ ಮಹಿಳಾ ಜನಪ್ರತಿನಿಧಿಗಳ ಮಾರ್ಗದರ್ಶನದ ಮಹತ್ವವನ್ನೂ ಅವರು ಒತ್ತಿ ಹೇಳಿದರು.ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರ ನಿರ್ಮಾಣದವರೆಗೆ ಭಾರತದ ಪಯಣದಲ್ಲಿ ಮಹಿಳೆಯರು ಮಹತ್ವದ ಕೊಡುಗೆ ನೀಡಿದ್ದಾರೆ. ಇಂದು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಉದ್ಯಮಶೀಲತೆ, ಕ್ರೀಡೆ, ರಕ್ಷಣೆ, ಬಾಹ್ಯಾಕಾಶ ಮತ್ತು ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವರು ನಾಯಕತ್ವ ವಹಿಸುತ್ತಿದ್ದಾರೆ ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುತ್ತಿವೆ ಎಂದು ಅವರು ಹೇಳಿದರು. ಇದೇ ವೇಳೆ, ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಸುರಕ್ಷಿತ ಡಿಜಿಟಲ್ ಪರಿಸರವನ್ನು ಖಚಿತಪಡಿಸುವುದು ಪ್ರಮುಖ ಆದ್ಯತೆಗಳಾಗಿವೆ ಎಂದರು. ಕರ್ನಾಟಕದ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯನ್ನು ಉಲ್ಲೇಖಿಸಿದ ಲೋಕಸಭಾಧ್ಯಕ್ಷರು, 12ನೇ ಶತಮಾನದಲ್ಲಿ ಶ್ರೀ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವು ಈ ಪ್ರದೇಶದ ಪ್ರಜಾಪ್ರಭುತ್ವ ಪರಂಪರೆಯ ಪ್ರಮುಖ ಸಂಕೇತವಾಗಿದೆ ಎಂದು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಮತ್ತು ಶೌರ್ಯವನ್ನೂ ಸ್ಮರಿಸಿದ ಅವರು, ಅವರ ಪರಂಪರೆಯು ಇಂದಿಗೂ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಿದೆ ಎಂದರು.ಎರಡು ದಿನಗಳ ಈ ಸಮ್ಮೇಳನವು ಕಾಮನ್‌ವೆಲ್ತ್ ರಾಷ್ಟ್ರಗಳ ಮಹಿಳಾ ಸಂಸದರು ಮತ್ತು ಶಾಸಕರಿಗೆ ತಮ್ಮ ಅನುಭವಗಳು, ನಾವೀನ್ಯತೆಗಳು ಹಾಗೂ ಉತ್ತಮ ಪದ್ಧತಿಗಳನ್ನು ಪರಸ್ಪರ ಹಂಚಿಕೊಳ್ಳಲು ಮಹತ್ವದ ವೇದಿಕೆಯಾಗಲಿದೆ ಎಂಬ ಆಶಯವನ್ನು ಶ್ರೀ ಬಿರ್ಲಾ ವ್ಯಕ್ತಪಡಿಸಿದರು. ಸಮ್ಮತಿ ಮತ್ತು ಅಸಮ್ಮತಿ ಸೇರಿದಂತೆ ವಿವಿಧ ದೃಷ್ಟಿಕೋನಗಳ ವಿನಿಮಯ, ಸಂವಾದ ಮತ್ತು ಚರ್ಚೆಗಳೇ ಪ್ರಜಾಪ್ರಭುತ್ವದ ಶಕ್ತಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಶಾಸನಸಭೆಗಳಲ್ಲಿ ಅನುಸರಿಸಲಾಗುತ್ತಿರುವ ಯಶಸ್ವಿ ಪದ್ಧತಿಗಳನ್ನು ಹಂಚಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಹಾಗೂ ಪಂಚಾಯತ್‌ಗಳಿಂದ ಸಂಸತ್ತಿನವರೆಗೆ ನವೀನ ಪ್ರಯತ್ನಗಳಿಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಸಮ್ಮೇಳನದ ಫಲಿತಾಂಶಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಲೋಕಸಭಾಧ್ಯಕ್ಷರು, ಮಹಿಳಾ ನಾಯಕತ್ವವು ರಾಷ್ಟ್ರವನ್ನು ಹೆಚ್ಚು ಒಳಗೊಳ್ಳುವಿಕೆ ಹೊಂದಿರುವ, ಸಮತೋಲಿತ ಮತ್ತು ನ್ಯಾಯಯುತ ಸಮಾಜದತ್ತ ಕೊಂಡೊಯ್ಯಲು ನೆರವಾಗುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತಷ್ಟು ಬಲಿಷ್ಠ, ಉತ್ತರದಾಯಿ ಹಾಗೂ ಫಲಿತಾಂಶ ಆಧಾರಿತವಾಗಲಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಗೂ ಕಿವಿಗೊಟ್ಟು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಾಗುತ್ತವೆ ಎಂದು ಹೇಳಿದರು.